ಚೆನ್ನೈ (ತಮಿಳುನಾಡು): ಡಿಎಂಕೆ ಉನ್ನತ ಶಿಕ್ಷಣ ಸಚಿವ ಪೊನ್ಮುಡಿ ಮತ್ತು ಅವರ ಪುತ್ರ ಗೌತಮ ಚಿಕಾಮಣಿ ಒಡೆತನದ 7 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಈ ಶೋಧದ ಕೊನೆಯಲ್ಲಿ ಜಾರಿ ಇಲಾಖೆಯ ಅಧಿಕಾರಿಗಳು ಸಚಿವ ಪೊನ್ಮುಡಿ ಅವರನ್ನು ಕಚೇರಿಗೆ ಕರೆದೊಯ್ದು ವಶಪಡಿಸಿಕೊಂಡ ದಾಖಲೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಎರಡನೇ ದಿನವೂ ಸಚಿವ ಪೊನ್ಮುಡಿ ಹಾಗೂ ಅವರ ಪುತ್ರ ಗೌತಮ ಚಿಕಮಣಿ ಅವರನ್ನು ಜಾರಿ ಅಧಿಕಾರಿಗಳು 3 ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಏಕೆ ದಾಳಿ ನಡೆಸಲಾಗಿದೆ ಎಂಬುದಕ್ಕೆ ಜಾರಿ ನಿರ್ದೇಶನಾಲಯ ಇಲಾಖೆ ವಿವರಣೆ ನೀಡಿದೆ.
ಜಾರಿ ನಿರ್ದೇಶನಾಲಯ ಮಾಹಿತಿ: ಜಾರಿ ನಿರ್ದೇಶನಾಲಯದ ಪ್ರಕಾರ, ''ಪೊನ್ಮುಡಿ ಅವರು ಖನಿಜ ಸಂಪನ್ಮೂಲ ಸಚಿವರಾಗಿದ್ದಾಗ, ಅವರ ಪುತ್ರ ಗೌತಮ ಚಿಕಾಮಣಿ, ಅವರ ಸಂಬಂಧಿಕರು ಐದು ಕ್ವಾರಿಗಳಿಗೆ ಅಕ್ರಮವಾಗಿ ಗಣಿಗಾರಿಕೆ ಪರವಾನಗಿಗಳನ್ನು ಖರೀದಿಸಿದ್ದಾರೆ. ಈ ಕ್ವಾರಿಗಳಿಂದ ಅಕ್ರಮವಾಗಿ ಗಳಿಸಿದ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ. ನಿರ್ದಿಷ್ಟವಾಗಿ ಇಂಡೋನೇಷ್ಯಾ ಮತ್ತು ಸೌದಿ ಅರೇಬಿಯಾದಲ್ಲಿನ ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದಿದೆ.
ಲೆಕ್ಕಕ್ಕೆ ಸಿಗದ 81.7 ಲಕ್ಷ ರೂ. ಹಾಗೂ 13 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ವಶ: ಅಲ್ಲದೇ, 2008ರಲ್ಲಿ 41.57 ಕೋಟಿ ರೂಪಾಯಿಗೆ ಖರೀದಿಸಿದ್ದ ಇಂಡೋನೇಷ್ಯಾ ಮೂಲದ ಕಂಪನಿಯೊಂದರ ಷೇರುಗಳನ್ನು 2022ರಲ್ಲಿ 100 ಕೋಟಿ ರೂಪಾಯಿಗೆ ಮಾರಾಟ ಮಾಡಿ ಹಲವು ಕೋಟಿ ಹವಾಲಾ ಹಣ ವಿನಿಮಯ ನಡೆದಿರುವುದು ಜಾರಿ ಇಲಾಖೆ ನಡೆಸಿದ ತನಿಖೆಯಿಂದ ಬೆಳಕಿಗೆ ಬಂದಿದೆ. ಚೆನ್ನೈನ ಪೊನ್ಮುಡಿ ಮನೆಯಲ್ಲಿ ಲೆಕ್ಕಕ್ಕೆ ಸಿಗದ 81.7 ಲಕ್ಷ ರೂಪಾಯಿ ಹಾಗೂ 13 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಜೊತೆಗೆ ವಶಪಡಿಸಿಕೊಂಡ ಹಣವು ಅವರ ಎರಡನೇ ಪುತ್ರ ಅಶೋಕ್ ಒಡೆತನದ ಆಸ್ಪತ್ರೆಗೆ ಸಂಬಂಧಿಸಿದೆ. ಪರಿಣಾಮ ಇಡಿಯು ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿತು. ಈ ವೇಳೆ, ಅಕ್ರಮವಾಗಿ ರಶೀದಿಗಳನ್ನು ಸಿದ್ಧಪಡಿಸಿ ಸಲ್ಲಿಸಲು ಯೋಜಿಸಿದ್ದರು ಎಂಬುದನ್ನು ಇಡಿ ಹೇಳಿದೆ.
ದಾಖಲೆಗಳ ಬಗ್ಗೆ ಗಂಭೀರ ತನಿಖೆ: ಜಪ್ತಿ ಮಾಡಿದ ಹಣಕ್ಕೆ ಸಚಿವ ಪೊನ್ಮುಡಿ ಬಳಿ ಸೂಕ್ತ ದಾಖಲೆಗಳಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಸಚಿವ ಪೊನ್ಮುಡಿ ಅವರು ಅಕ್ರಮವಾಗಿ ಸಂಪಾದಿಸಿದ ಹಣವನ್ನು ಕಂಪನಿಗಳ ಆಸ್ತಿ ಮತ್ತು ಷೇರುಗಳಾಗಿ ಹೂಡಿಕೆ ಮಾಡಿರುವುದು. ಇನ್ನೂ ಇತರ ಹೂಡಿಕೆಗಳಲ್ಲಿ ತೊಡಗಿರುವುದು ಜಾರಿ ಇಲಾಖೆಯ ತನಿಖೆಯಿಂದ ಬೆಳಕಿಗೆ ಬಂದಿದೆ. ಅಲ್ಲದೆ, ಪೊನ್ಮುಡಿಗೆ ಸೇರಿದ ಮಹತ್ವದ ದಾಖಲೆಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದಲ್ಲದೇ, ಪೊನ್ಮುಡಿಗೆ ಸೇರಿದ 41.9 ಕೋಟಿ ರೂಪಾಯಿ ಠೇವಣಿ ಮೊತ್ತವನ್ನು ಸ್ಥಗಿತಗೊಳಿಸಲಾಗಿದೆ. ವಿಶೇಷವಾಗಿ ವಶಪಡಿಸಿಕೊಂಡ ದಾಖಲೆಗಳ ಬಗ್ಗೆ ಗಂಭೀರ ತನಿಖೆ ನಡೆಸುತ್ತಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಇದನ್ನೂ ಓದಿ: ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ