ನವದೆಹಲಿ: ದೆಹಲಿ ಅಬಕಾರಿ ನೀತಿ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ) ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಎರಡನೇ ಬಾರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಡಿಸೆಂಬರ್ 21 ರಂದು ಹಾಜರಾಗುವಂತೆ ಅರವಿಂದ್ ಕೇಜ್ರಿವಾಲ್ ಸೂಚಿಸಲಾಗಿದೆ.
ಅರವಿಂದ್ ಕೇಜ್ರಿವಾಲ್ ಅವರಿಗೆ ನವೆಂಬರ್ 2 ರಂದು ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಅಂದು ತನಗೆ ನೀಡಿದ ನೋಟಿಸ್ ''ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ'' ಎಂದು ಆರೋಪಿಸಿ, ನೀಡಿದ ನೋಟಿಸ್ ಹಿಂಪಡೆಯುವಂತೆ ಜಾರಿ ನಿರ್ದೇಶನಾಲಯಕ್ಕೆ ಅರವಿಂದ್ ಕೇಜ್ರಿವಾಲ್ ಪತ್ರ ಬರೆದಿದ್ದರು.
ಪಂಚ ರಾಜ್ಯಗಳ ಚುನಾವಣೆ ಇದ್ದ ಕಾರಣ ಅರವಿಂದ್ ಕೇಜ್ರಿವಾಲ್ ವಿವಿಧ ರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ಭಾಗಿ ಆಗುತ್ತಿದ್ದರು. ಹೀಗಾಗಿ "ಚುನಾವಣೆಗೆ ಒಳಪಡುವ ರಾಜ್ಯಗಳಲ್ಲಿ ಪ್ರಚಾರ ಮಾಡುವುದನ್ನು ತಡೆಯುವ ಗುರಿ ಸಮನ್ಸ್ನ ಹಿಂದಿದೆ'' ಎಂದು ಮುಖ್ಯಮಂತ್ರಿ ಕಚೇರಿ ಆಪಾದಿಸಿತ್ತು. ಅಲ್ಲದೇ ''ಬಿಜೆಪಿಯ ಒತ್ತಾಯದ ಮೇರೆಗೆ ತಮಗೆ ನೋಟಿಸ್ ಕಳುಹಿಸಲಾಗಿದೆ'' ಎಂದೂ ಕೇಜ್ರಿವಾಲ್ ದೂರಿದ್ದರು. ಈ ವೇಳೆ ಆಮ್ ಆದ್ಮಿ ಪಕ್ಷದ ಸಂಚಾಲಕರೂ ಆಗಿರುವ ಕೇಜ್ರಿವಾಲ್ ನವೆಂಬರ್ 2 ರಂದು ಚುನಾವಣಾ ಪ್ರಚಾರಕ್ಕಾಗಿ ಮಧ್ಯಪ್ರದೇಶಕ್ಕೆ ತೆರಳಲಿದ್ದರು. ಸಿಂಗ್ರೌಲಿಯಲ್ಲಿ ಸಿಎಂ ಭಗವಂತ್ ಮಾನ್ ಜೊತೆಗೆ ರೋಡ್ ಶೋ ನಡೆಸಲಿದ್ದರು.
ಮದ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡಲು ದೆಹಲಿ ಸರ್ಕಾರದ 2021-22ರ ಅಬಕಾರಿ ನೀತಿಯು ಕಾರ್ಟೆಲೈಸೇಶನ್‌ಗೆ ಅವಕಾಶ ಮಾಡಿಕೊಟ್ಟಿತು ಮತ್ತು ಅದಕ್ಕಾಗಿ ಲಂಚವನ್ನು ನೀಡಿದ ಕೆಲವು ಡೀಲರ್‌ಗಳಿಗೆ ಒಲವು ತೋರಿತು ಎಂದು ಆರೋಪಿಸಲಾಗಿದೆ, ಆಮ್ ಆದ್ಮಿ ಪಕ್ಷ (ಎಎಪಿ) ಇದನ್ನು ಪದೇ ಪದೆ ನಿರಾಕರಿಸಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ಪ್ರಕರಣ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ಶಿಫಾರಸು ಮಾಡಿದರು. ಕಳೆದ ವರ್ಷ ಆಗಸ್ಟ್ 17 ರಂದು ಸಿಬಿಐ ಎಫ್‌ಐಆರ್ ದಾಖಲಿಸಿದೆ. ಆದರೆ, ಎಫ್ಐಆರ್ನಲ್ಲಿ ಕೇಜ್ರಿವಾಲ್ ಅವರನ್ನು ಆರೋಪಿ ಎಂದು ಹೆಸರಿಸಲಾಗಿಲ್ಲ.
ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್, ಸಂಜಯ್ ಸಿಂಗ್ ಮತ್ತು ರಾಜ್ ಕುಮಾರ್ ಆನಂದ್ ನಂತರ ಕಾನೂನು ವಿವಾದದಲ್ಲಿ ಸಿಲುಕಿರುವ ಐದನೇ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರು ಪ್ರಸ್ತುತ ಬಂಧನದಲ್ಲಿದ್ದಾರೆ.
ಇದನ್ನೂ ಓದಿ: ಇಡಿ ವಿಚಾರಣೆಗೆ ಅರವಿಂದ್ ಕೇಜ್ರಿವಾಲ್ ಗೈರು; ಮಧ್ಯಪ್ರದೇಶ ಚುನಾವಣಾ ರ‍್ಯಾಲಿಯಲ್ಲಿ ಹಾಜರು