ಮುಂಬೈ: ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಪ್ರಸಾರಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.
ಕುಂದ್ರಾ ಫೆಬ್ರವರಿ 2019ರಲ್ಲಿ ಆರ್ಮ್ಸ್ ಪ್ರೈಮ್ ಮೀಡಿಯಾ ಲಿಮಿಟೆಡ್ ಎಂಬ ಕಂಪನಿ ಆರಂಭಿಸಿ 'ಹಾಟ್‌ಶಾಟ್ಸ್' ಹೆಸರಿನ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದರು. ಇದನ್ನು ಯುಕೆ ಮೂಲದ ಕಂಪನಿ ಕೆನ್ರಿನ್‌ಗೆ ಮಾರಾಟ ಮಾಡಿದ್ದಾರೆ. ಕೆನ್ರಿನ್‌ನ ಸಿಇಒ ಪ್ರದೀಪ್ ಬಕ್ಷಿ ವಾಸ್ತವವಾಗಿ ರಾಜ್ ಕುಂದ್ರಾ ಅವರ ಸೋದರ ಮಾವ. ಹಾಟ್‌ಶಾಟ್ಸ್ ಆ್ಯಪ್ ನಿರ್ವಹಣೆಗಾಗಿ ಕುಂದ್ರಾ ಅವರ ಕಂಪನಿ ವಿಯಾನ್ ಇಂಡಸ್ಟ್ರೀಸ್ ಕೆನ್ರಿನ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ ವಿಯಾನ್‌ನ 13 ಬ್ಯಾಂಕ್ ಖಾತೆಗಳಿಂದ ಕೋಟ್ಯಂತರ ರೂಪಾಯಿ ಅಕ್ರಮ ವಹಿವಾಟು ನಡೆಸಿರುವುದನ್ನು ಜಾರಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಇದನ್ನೂ ಓದಿ: ನಾ, ನಾ.. ನಾನವನಲ್ಲ.. ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ.. 6 ತಿಂಗಳ ನಂತ್ರ ಮೌನ ಮುರಿದ ರಾಜ್ ಕುಂದ್ರಾ..
ಹಾಟ್‌ಶಾಟ್ಸ್ ಅಪ್ಲಿಕೇಶನ್ ವಾಸ್ತವವಾಗಿ ಅಶ್ಲೀಲ ಚಲನಚಿತ್ರಗಳ ತಾಣ. ಇದನ್ನು ಭಾರತದಲ್ಲಿ ತಯಾರಿಸಲಾಗಿದ್ದು, ಈ ಆ್ಯಪ್ ಪ್ರವೇಶಿಸಲು ಚಂದಾದಾರರು ಹಣ ಕೊಟ್ಟು ಸದಸ್ಯತ್ವ ಪಡೆಯಬೇಕಾಗಿತ್ತು. ಚಂದಾದಾರರ ಮೂಲಕ ಗಳಿಸಿದ ಹಣವನ್ನು ಕುಂದ್ರಾ ಕಂಪನಿ ವಿಯಾನ್ ಇಂಡಸ್ಟ್ರೀಸ್ ಹೆಸರಿನಲ್ಲಿ ಪಡೆಯುತ್ತಿತ್ತು. ಅಶ್ಲೀಲ ದಂಧೆಯಿಂದ ಗಳಿಸಿದ ಹಣವು ಯುಕೆ ಮೂಲಕ ಚಲಾವಣೆಯಲ್ಲಿರುವ ಕುಂದ್ರಾ ಕಂಪನಿಯ ಖಾತೆಗೆ ಸರಾಗವಾಗಿ ಹರಿದುಬರುತ್ತಿತ್ತು. ಜುಲೈ 19, 2021 ರಂದು ಅಶ್ಲೀಲ ಚಿತ್ರಗಳನ್ನು ನಿರ್ಮಿಸಿದ ಗುರುತರ ಆರೋಪದಡಿ 11 ಆರೋಪಿಗಳೊಂದಿಗೆ ರಾಜ್ ಕುಂದ್ರಾರನ್ನು ತನಿಖಾ ಸಂಸ್ಥೆಗಳು ಬಂಧಿಸಿದ್ದವು. ಸೆಪ್ಟೆಂಬರ್ 20 ರಂದು ಮುಂಬೈ ನ್ಯಾಯಾಲಯವು ಈ ಪ್ರಕರಣದಲ್ಲಿ 50,000 ರೂಪಾಯಿಗಳ ಶ್ಯೂರಿಟಿಯ ಮೇಲೆ ಕುಂದ್ರಾಗೆ ಜಾಮೀನು ಮಂಜೂರು ಮಾಡಿದೆ. ಇದೀಗ ಪ್ರಕರಣವನ್ನು ಇಡಿ ಕೈಗೆತ್ತಿಕೊಂಡಿದೆ.