ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಭೀತಿ ನಡುವೆ ಇದೀಗ ಒಮಿಕ್ರಾನ್ ಭಯ ಶುರುವಾಗಿದ್ದು, ಇದರ ಬೆನ್ನಲ್ಲೇ ಮುಂದಿನ ವರ್ಷದ ಆರಂಭದಲ್ಲೇ ಉತ್ತರ ಪ್ರದೇಶ, ಪಂಜಾಬ್, ಗೋವಾ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕಾಗಿ ಎಲ್ಲ ಪಕ್ಷಗಳು ಈಗಾಗಲೇ ಭರದ ಪ್ರಚಾರ ನಡೆಸಿದ್ದು, ಇದೀಗ ಕೇಂದ್ರ ಚುನಾವಣಾ ಆಯೋಗ ಮಹತ್ವದ ಮಾರ್ಗಸೂಚಿ ರಿಲೀಸ್ ಮಾಡಿದೆ.
ಕೇಂದ್ರ ಆರೋಗ್ಯ ಇಲಾಖೆ ಜೊತೆ ಮಹತ್ವದ ಸಭೆ ನಡೆಸಿದ ಕೇಂದ್ರ ಚುನಾವಣಾ ಆಯೋಗ ಚುನಾವಣೆ ನಡೆಯಲಿರುವ ಐದು ರಾಜ್ಯಗಳಿಗೋಸ್ಕರ ಮಾರ್ಗಸೂಚಿ ಹೊರಡಿಸಿದೆ. ಈಗಾಗಲೇ ಕೇಂದ್ರ ಆರೋಗ್ಯ ಇಲಾಖೆಗೆ ಇದರ ಮಾಹಿತಿ ಸಹ ನೀಡಿದೆ. ಚುನಾವಣಾ ಆಯೋಗದ ಪ್ರಕಾರ ಎಲೆಕ್ಷನ್ ದಿನಾಂಕ ಘೋಷಣೆಯಾಗುವುದಕ್ಕೂ ಮುಂಚಿತವಾಗಿ ಐದು ರಾಜ್ಯದ ಜನರಿಗೆ ಎರಡು ಡೋಸ್ ಕೋವಿಡ್ ವ್ಯಾಕ್ಸಿನ್ ನೀಡುವಂತೆ ಸೂಚನೆ ನೀಡಿದೆ.
ಇದನ್ನೂ ಓದಿರಿ: ನಾಯಿ ಮತ್ತು ನಿಯತ್ತು: ಮಾಲೀಕನ ಪ್ರಾಣ ಉಳಿಸಲು ಸರ್ಪದೊಂದಿಗೆ ಸೆಣಸಾಡಿ ಪ್ರಾಣ ತೆತ್ತ ಶ್ವಾನ!
ಚುನಾವಣೆ ನಡೆಯಲಿರುವ ಗೋವಾ, ಮಣಿಪುರ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯದ ಪ್ರತಿಯೊಬ್ಬರು (ಮತದಾನ ಮಾಡುವ) ಸಂಪೂರ್ಣವಾಗಿ ಲಸಿಕೆಗೊಳಪಡಿಸುವಂತೆ ತಿಳಿಸಲಾಗಿದ್ದು, ಲಸಿಕೆ ಪ್ರಕ್ರಿಯೆ ಮತ್ತಷ್ಟು ತೀವ್ರಗೊಳಿಸಲು ಸೂಚನೆ ನೀಡಿದೆ. ಕೊರೊನಾ ಹಾಗೂ ಒಮಿಕ್ರಾನ್ ಉಲ್ಭಣದ ನಡುವೆ ಕೂಡ ಎಲ್ಲ ರಾಜ್ಯಗಳಲ್ಲೂ ಚುನಾವಣಾ ಪ್ರಚಾರ ಸಭೆ ನಡೆಸಲಾಗುತ್ತಿದ್ದು, ಇದರ ಬಗ್ಗೆ ಚುನಾವಣಾ ಆಯೋಗ ತೀವ್ರ ಕಳವಳ ವ್ಯಕ್ತಪಡಿಸಿದೆ.
ಚುನಾವಣೆ ಮುಂದೂಡಿಕೆಗೆ ಹಿಂದೇಟು
ಲಭ್ಯವಾಗಿರುವ ಮಾಹಿತಿ ಪ್ರಕಾರ ಕೇಂದ್ರ ಚುನಾವಣಾ ಆಯೋಗ ಐದು ರಾಜ್ಯಗಳಲ್ಲಿ ಎಲೆಕ್ಷನ್ ಮುಂದೂಡಿಕೆ ಮಾಡಲು ಹಿಂದೇಟು ಹಾಕಿದೆ ಎನ್ನಲಾಗಿದೆ. ದೇಶದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಹಾಗೂ ಒಮಿಕ್ರಾನ್ ಭೀತಿ ನಡುವೆ ಕೂಡ ಈ ನಿರ್ಧಾರ ಕೈಗೊಂಡಿದ್ದಾಗಿ ವರದಿಯಾಗಿದೆ.