ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಹೆಚ್ಚುವರಿ ಎಲೆಕ್ಟ್ರಾನಿಕ್ ಮತ ಯಂತ್ರಗಳು (ಇವಿಎಂ) ಮತ್ತು ಪೇಪರ್-ಟ್ರಯಲ್ ಯಂತ್ರಗಳನ್ನು ಖರೀದಿಸಲು ಸುಮಾರು 9,300 ಕೋಟಿ ವೆಚ್ಚವಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ಒಂದೇ ಸಮಯಕ್ಕೆ ಚುನಾವಣೆಗಳನ್ನು ನಡೆಸಲು ಅಗತ್ಯ ಕಾರ್ಯಸೂಚಿಯನ್ನು ಪರಿಶೀಲಿಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ ಉನ್ನತ ಮಟ್ಟದ ಸಮಿತಿ ರಚಿಸಿತ್ತು.
'ಒಂದು ರಾಷ್ಟ್ರ ಒಂದು ಚುನಾವಣೆ'ಯಡಿ ಏಕಕಾಲಕ್ಕೆ ಚುನಾವಣೆ ನಡೆಸುವಾಗ ಎದುರಾಗಬಹುದಾದ ಹಲವಾರು ಸಮಸ್ಯೆಗಳನ್ನು ಚುನಾವಣಾ ಆಯೋಗ ವಿವರಿಸಿದೆ. ಏಕಕಾಲದಲ್ಲಿ ಚುನಾವಣೆ ನಡೆಸಲು ಎಲೆಕ್ಟ್ರಾನಿಕ್ ಮತಯಂತ್ರಗಳು ಮತ್ತು ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಯಂತ್ರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಬೇಕಾಗುತ್ತದೆ ಎಂಬುದು ಇಲ್ಲಿ ಪ್ರಮುಖ ವಿಷಯ. ಏಕಕಾಲಕ್ಕೆ ಚುನಾವಣೆ ನಡೆಸಲು, ಇವಿಎಂ ಮತ್ತು ವಿವಿಪ್ಯಾಟ್‌ಗಳ ಖರೀದಿಗೆ ಒಟ್ಟು 9284.15 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಆಯೋಗ ಅಂದಾಜು ಮಾಡಿದೆ.
'ಇವಿಎಂನ ಬಳಕೆಯ ಅವಧಿ 15 ವರ್ಷಗಳು. ಆ ಅವಧಿಯೊಳಗೆ ಯಂತ್ರಗಳನ್ನು ಬದಲಾಯಿಸಬೇಕು. ಇದರಿಂದ ವೆಚ್ಚ ಅಧಿಕವಾಗುತ್ತದೆ. ಅದಲ್ಲದೆ, ಈ ಯಂತ್ರಗಳನ್ನು ಸಂಗ್ರಹಿಸುವುದರಿಂದ ಗೋದಾಮಿನ ವೆಚ್ಚ ಕೂಡ ಹೆಚ್ಚಾಗುತ್ತದೆ' ಎಂಬುದು ಚುನಾವಣಾ ಆಯೋಗದ ಲೆಕ್ಕಾಚಾರ.
ಎರಡು ಸಾರ್ವಜನಿಕ ವಲಯದ ಉದ್ಯಮಗಳಾದ (PSU) ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ರಿಮೋಟ್ ವೋಟಿಂಗ್ ಮಷೀನ್ (RVM) ಮತ್ತು ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್‌ಗಳನ್ನು (VVPAT) ತಯಾರಿಸುತ್ತವೆ. ಚುನಾವಣಾ ಆಯೋಗವು ಸಂಸತ್ತಿನ ಮತ್ತು ವಿಧಾನಸಭೆ ಚುನಾವಣೆಗಳನ್ನು ನಡೆಸಲು ಆದೇಶಿಸಿದರೆ, ರಾಜ್ಯ ಚುನಾವಣಾ ಆಯೋಗವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುತ್ತದೆ. ಚುನಾವಣಾ ಆಯೋಗ (EC) ಮತ್ತು ರಾಜ್ಯ ಚುನಾವಣಾ ಆಯೋಗಗಳು (SEC) ಸಂವಿಧಾನದ ಅಡಿಯಲ್ಲಿ ಒಂದು ನಿರ್ದಿಷ್ಟ ಆದೇಶದೊಂದಿಗೆ ಪ್ರತ್ಯೇಕ ಸಂಸ್ಥೆಗಳಾಗಿವೆ.
ಕೋವಿಂದ್ ನೇತೃತ್ವದಲ್ಲಿ ಸಮಿತಿ: 'ಒಂದು ದೇಶ, ಒಂದು ಚುನಾವಣೆ’ಯ ಕಾರ್ಯ ಸಾಧ್ಯತೆಯ ಪರಿಶೀಲನೆಗಾಗಿ ಕೇಂದ್ರ ಸರ್ಕಾರ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದಲ್ಲಿ ಸೆ.1ರಂದು ಸಮಿತಿ ರಚಿಸಿದೆ. ಈ ಬೆನ್ನಲ್ಲೇ, ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿವೆ. ಬಿಜೆಪಿ ನೇತೃತ್ವದ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಮುಖಂಡರು ನಿರ್ಧಾರವನ್ನು ಸ್ವಾಗತಿಸಿದ್ದರೆ, ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಕೇಂದ್ರದ ನಡೆಯನ್ನು ಟೀಕಿಸಿವೆ.
ಅಧಿರ್ ರಂಜನ್ ಚೌಧರಿ ಆಕ್ಷೇಪ: ಕೋವಿಂದ್ ನೇತೃತ್ವದಲ್ಲಿ 8 ಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಿದ ಕೇಂದ್ರ ಶನಿವಾರ ಅಧಿಸೂಚನೆ ಹೊರಡಿಸಿದೆ. ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಅಧಿರ್ ರಂಜನ್ ಚೌಧರಿ, ರಾಜ್ಯಸಭೆಯ ವಿಪಕ್ಷ ಮಾಜಿ ನಾಯಕ ಗುಲಾಂ ನಬಿ ಆಜಾದ್, ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎನ್.ಕೆ.ಸಿಂಗ್ ಸದಸ್ಯರಾಗಿದ್ದಾರೆ. ಹಿರಿಯ ವಕೀಲ ಹರೀಶ್ ಸಾಳ್ವೆ ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಸಿ.ಕಶ್ಯಪ್, ಗುಪ್ತದಳ ಮಾಜಿ ಮುಖ್ಯ ಆಯುಕ್ತ ಸಂಜಯ್ ಕೊಠಾರಿ ಸಮಿತಿಯ ಇತರ ಸದಸ್ಯರು. ಆದರೆ ಬಳಿಕ ನಡೆದ ಬೆಳವಣಿಗೆಯಲ್ಲಿ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಆಕ್ಷೇಪ ವ್ಯಕ್ತಪಡಿಸಿ, ತಾವು ಸಮಿತಿಯ ಭಾಗವಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಅವಲೋಕಿಸಲು ರಾಮನಾಥ್ ಕೋವಿಂದ್ ನೇತೃತ್ವದಲ್ಲಿ ಸಮಿತಿ ರಚನೆ