ಇತ್ತೀಚೆಗೆ ಜಗತ್ತಿನ ವಿವಿಧೆಡೆ ಭೂಕಂಪನದ ಬಗ್ಗೆ ವರದಿಯಾಗುತ್ತಿದೆ. ಟರ್ಕಿಯಲ್ಲಿ ಭಾರಿ ಪ್ರಮಾಣದ ಭೂಕಂಪನ ಉಂಟಾಗಿ 40 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇದೀಗ ನ್ಯೂಜಿಲೆಂಡ್ನ ಉತ್ತರ ಭಾಗದಲ್ಲಿರುವ ಕೆರ್ಮಾಡೆಕ್ ದ್ವೀಪ ಪ್ರದೇಶದಲ್ಲಿ ಪ್ರಾಕೃತಿಕ ವಿಕೋಪ ವರದಿಯಾಗಿದೆ.
ಇಂದು ಬೆಳಿಗ್ಗೆ 6.40ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೇ (ಯುಎಸ್ಜಿಎಸ್) ಹೇಳಿದೆ. ನ್ಯೂಜಿಲೆಂಡ್ನ ಜನವಸತಿ ಪ್ರದೇಶವಲ್ಲದ ಕೆಲವು ಕಡೆಗಳಲ್ಲಿ ಘಟನೆ ನಡೆದಿರುವುದಾಗಿ ತಿಳಿಸಿದೆ. ಎರಡನೇ ಭೂಕಂಪನವು 6.55ಕ್ಕೆ ನಡೆದಿರುವುದಾಗಿ ಯುಎಸ್ಜಿಎಸ್ ಮಾಹಿತಿ ನೀಡಿದೆ.
ಸುನಾಮಿ ಭಯವಿಲ್ಲ: ಕೆರ್ಮಾಡೆಕ್ ದ್ವೀಪ ಪ್ರದೇಶದಲ್ಲಿ ಸಂಭವಿಸಿದ ಭೂಕಂಪವು ಸುಮಾರು 10 ಕಿ.ಮೀ ಆಳದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಭೂಕಂಪನ ಕೇಂದ್ರದಿಂದ ಸುಮಾರು 300 ಕಿ.ಮೀ ವ್ಯಾಪ್ತಿಯಲ್ಲಿರುವ ಕರಾವಳಿ ಪ್ರದೇಶಗಳಿಗೆ ಅಪಾಯಕಾರಿ ಸುನಾಮಿಗಳು ಉಂಟಾಗುವ ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಕೆರ್ಮಾಡೆಕ್ ದ್ವೀಪಗಳಲ್ಲಿ ಭೂಕಂಪನದಿಂದ ನ್ಯೂಜಿಲೆಂಡ್‌ಗೆ ಯಾವುದೇ ಸುನಾಮಿ ಭಯವಿಲ್ಲ. ತುರ್ತು ಸಂದರ್ಭಗಳಿದ್ದರೆ ದೇಶದ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆಯನ್ನು ಸಂಪರ್ಕಿಸಬಹುದೆಂದು ಸಂಸ್ಥೆ ಟ್ವೀಟ್ ಮಾಡಿದೆ. ಆಸ್ಟ್ರೇಲಿಯಾಕ್ಕೆ ಯಾವುದೇ ಸುನಾಮಿ ಬೆದರಿಕೆ ಇಲ್ಲ ಎಂದು ಆಸ್ಟ್ರೇಲಿಯಾದ ಹವಾಮಾನ ಇಲಾಖೆ ತಿಳಿಸಿದೆ. ಯುಎಸ್ಜಿಎಸ್ ಕೂಡ ಇದನ್ನು ಖಚಿತಪಡಿಸಿದೆ.
ಕಾರಣವೇನು?: ನ್ಯೂಜಿಲೆಂಡ್‌ನಲ್ಲಿ ಭೂಕಂಪಗಳು ನಡೆಯುತ್ತಲೇ ಇರುತ್ತವೆ. ಇದು ಪೆಸಿಫಿಕ್ ಪ್ಲೇಟ್ ಮತ್ತು ಆಸ್ಟ್ರೇಲಿಯನ್ ಪ್ಲೇಟ್ ಎಂಬ ಎರಡು ಪ್ರಮುಖ ಟೆಕ್ಟೋನಿಕ್ ಪ್ಲೇಟ್ಗಳ ನಡುವೆ ಭೂಭಾಗ ಹಂಚಿಕೊಂಡಿದೆ. ಅಲ್ಲದೇ ರಿಂಗ್ ಆಫ್ ಫೈರ್ ಎಂದೂ ಕರೆಯಲ್ಪಡುವ ತೀವ್ರವಾದ ಭೂಕಂಪನ ವಲಯವನ್ನು ಒಳಗೊಂಡಿದೆ. ಹೀಗಾಗಿ ಪ್ರತಿವರ್ಷ ಸಾವಿರಾರು ಭೂಕಂಪನಗಳು ಸಂಭವಿಸುತ್ತವೆ ಎಂದು ನ್ಯೂಜಿಲೆಂಡ್ ಭೂಕಂಪನ ಮಾನಿಟರಿಂಗ್ ಇಲಾಖೆ ತಿಳಿಸಿದೆ. ಹೆಚ್ಚಿನ ಭೂಕಂಪಗಳು ಸಾಮಾನ್ಯ ಭೂಕಂಪಗಳಾಗಿದ್ದು, ಇನ್ನು ಕೆಲವು ಕಂಪನಗಳು ಕಟ್ಟಡ, ಜೀವ ಹಾನಿ ಉಂಟು ಮಾಡುತ್ತದೆ ಎಂದಿದೆ.
ಅಂಡಮಾನ್ ದ್ವೀಪದಲ್ಲಿ ಭೂಕಂಪನ: ಅಂಡಮಾನ್ ನಿಕೋಬಾರ್‌ನಲ್ಲಿ ಇತ್ತೀಚೆಗೆ ಭೂಕಂಪನ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ ದಾಖಲಾಗಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿತ್ತು. ಈಗಾಗಲೇ ಆರ್ಥಿಕ ದಿವಾಳಿ ಸ್ಥಿತಿ ಎದುರಿಸುತ್ತಿರುವ ಪಾಕಿಸ್ತಾನದಲ್ಲಿಯೂ ಭೂಕಂಪನ ಅನುಭವವಾಗಿದೆ. ಇದು 4.3 ತೀವ್ರತೆ ಹೊಂದಿತ್ತು.
ಇದನ್ನೂ ಓದಿ: ನಡುಕ ನಿಲ್ಲಿಸದ ಟರ್ಕಿ: ಮತ್ತೆ 5.6 ತೀವ್ರತೆಯ ಕಂಪನ; ಧರೆಗುರುಳಿದ ಕಟ್ಟಡಗಳು