ಸತಾರಾ(ಮಹಾರಾಷ್ಟ್ರ): ಜಿಲ್ಲೆಯ ಕೊಯ್ನಾ ಅಣೆಕಟ್ಟಿನ ಬಳಿ ಭಾನುವಾರ ಬೆಳಗಿನ ಜಾವ 3.53ಕ್ಕೆ 3 ತೀವ್ರತೆಯ ಭೂಕಂಪನದ ಅನುಭವವಾಗಿದೆ. ಇದು ಲಘು ಭೂಕಂಪವಾಗಿದ್ದು ಕೊಯ್ನಾ ಅಣೆಕಟ್ಟು ಪ್ರದೇಶದಲ್ಲಿ ಮಾತ್ರ ಇದರ ಅನುಭವವಾಗಿದೆ. ಈ ಭೂಕಂಪದ ಕೇಂದ್ರಬಿಂದು ಅಣೆಕಟ್ಟಿನ ಉತ್ತರಕ್ಕೆ 5 ಕಿ.ಮೀ ದೂರದಲ್ಲಿದೆ. ಭೂಕಂಪದಿಂದ ಅಣೆಕಟ್ಟೆಗೆ ಯಾವುದೇ ಹಾನಿಯಾಗಿಲ್ಲ ಎಂದು ಅಣೆಕಟ್ಟೆ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3 ರಷ್ಟು ದಾಖಲಾಗಿದೆ.
ಪಟಾನ್ ಮತ್ತು ಕೊಯ್ನಾ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ. ಭೂಕಂಪದಿಂದ ಕೊಯ್ನಾ ಅಣೆಕಟ್ಟೆಗೆ ಮತ್ತು ಪಟಾನ್ ತಾಲೂಕಿನಲ್ಲಿ ಯಾವುದೇ ಹಾನಿಯಾಗಿಲ್ಲ. ಭೂಕಂಪದ ಕೇಂದ್ರ ಬಿಂದು ಡ್ಯಾಂನಿಂದ 5 ಕಿ.ಮೀ. ಮತ್ತು ಕೊಯ್ನಾ ನಗರದಿಂದ 24 ಕಿ.ಮೀ ದೂರದಲ್ಲಿದೆ. ಭೂಕಂಪ 30 ಕಿ. ಮೀ ಆಳದಲ್ಲಿ ಸಂಭವಿಸಿದೆ. ಈ ಲಘು ಭೂಕಂಪದಿಂದಾಗಿ ಮನೆ ಮತ್ತು ಇತರೆ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷ ಪ್ರಾರಂಭದ ಫೆಬ್ರವರಿ 26 ರಂದು ಬೆಳಗ್ಗೆ 10:30 ಕ್ಕೆ ಮ್ಯಾನ್ ತಾಲೂಕಿನಲ್ಲಿ ಭೂಕಂಪ ಸಂಭವಿಸಿತ್ತು, ಸರಣಿ ಭೂಕಂಪದಿಂದಾಗಿ 15 ಮನೆಗಳಿಗೆ ಹಾನಿಯಾಗಿತ್ತು. ಬರಪೀಡಿತ ತಾಲೂಕಿನಲ್ಲಿ ಒಂದೇ ದಿನದಲ್ಲಿ ಮೂರು ಬಾರಿ ಭೂಮಿ ಕಂಪಿಸಿದ ಪರಿಣಾಮ ಈ ಪ್ರದೇಶ ನಾಗರಿಕರು ಭಯಭೀತರಾಗಿದ್ದರು.
2022 ಜನವರಿ 8 ರಂದು ಸತಾರಾ ಜಿಲ್ಲೆಯ ಕೊಯ್ನಾ ಅಣೆಕಟ್ಟಿನ ಪ್ರದೇಶದಲ್ಲಿ 2.8 ತೀವ್ರತೆಯ ಮೊದಲ ಭೂಕಂಪ ಸಂಭವಿಸಿತ್ತು. ನಂತರ ಫೆಬ್ರವರಿ 1 ರಂದು ಮತ್ತು ಜುಲೈ 22 ರಂದು 3.2 ಹಾಗೂ ಅಕ್ಟೋಬರ್ 28 ರಂದು 2.8 ತೀವ್ರತೆಯ ಭೂಕಂಪ ಸಂಭವಿಸಿತ್ತು. 2021 ರಲ್ಲಿ, ಸತಾರಾ ಜಿಲ್ಲೆಯಲ್ಲಿ ಸಣ್ಣ ಮತ್ತು ದೊಡ್ಡ ಭೂಕಂಪಗಳ ಸರಣಿ ಮುಂದುವರೆದಿತ್ತು. ಇಲ್ಲಿ ಒಟ್ಟು 128 ಭೂಕಂಪಗಳ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3 ರ ತೀವ್ರತೆಯ 119 ಬಾರಿ ಮತ್ತು 4 ರ ತೀವ್ರತೆಯ 9 ಭೂಕಂಪಗಳು ಸಂಭವಿಸಿವೆ.
ಇದನ್ನೂ ಓದಿ:ಮಧ್ಯರಾತ್ರಿ ಭೂಮಿ ಗಡಗಡ.. ಎರಡು ಗಂಟೆಗಳ ಅಂತರದಲ್ಲಿ ಮೂರು ಬಾರಿ ಭೂಕಂಪ