ಉತ್ತರಕಾಶಿ (ಉತ್ತರಾಖಂಡ): ಇಂದು ಮುಂಜಾನೆ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ. ಬೆಳಗ್ಗೆ 3.49 ನಿಮಿಷಕ್ಕೆ ಭೂ ಕಂಪನ ಸಂಭವಿಸಿದೆ. ಇದರ ಕೇಂದ್ರ ಬಿಂದು 5 ಕಿ ಮಿ ಆಳದಲ್ಲಿ ಕೇಂದ್ರಿಕೃತವಾಗಿತ್ತು ಎಂದು ತಿಳಿದು ಬಂದಿದೆ. ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಜಿಲ್ಲೆಯ ಪುರೋಲಾ, ಬರ್ಕೋಟ್, ನೌಗಾಂವ್, ಮೋರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಯಾವುದೇ, ಜೀವಹಾನಿ ಮತ್ತು ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ನಿನ್ನೆದಿನ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಹಸೋರಿ ಗ್ರಾಮದಲ್ಲೂ ಭೂಕಂಪದ ಅನುಭವವಾಗಿದೆ. ರಾತ್ರಿ 8.57 ನಿಮಿಷಕ್ಕೆ 1.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಭೂಕಂಪದ ಕೇಂದ್ರಬಿಂದುವು ಭೂಮಿಯ 7 ಕಿಮೀ ಆಳದಲ್ಲಿದೆ ಪತ್ತೆಯಾಗಿದೆ.
ದೆಹಲಿಯಲ್ಲೂ ಕಂಪನ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಭೂ ಕಂಪನ ಸಂಭವಿಸಿತ್ತು. ದೆಹಲಿ-ಎನ್‌ಸಿಆರ್, ಉತ್ತರ ಪ್ರದೇಶದ ನೋಯ್ಡಾದ ಜನರಿಗೆ ಕಂಪನದ ಅನುಭವವಾಗಿತ್ತು. ನೋಯ್ಡಾ ಸೆಕ್ಟರ್ 75ರ ಹಲವೆಡೆ ಕಂಪಿಸಿದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ನೇಪಾಳದಲ್ಲಿ ಸಂಭವಿಸಿದ ಭೂಕಂಪದ ಪರಿಣಾಮ ರಾಷ್ಟ್ರ ರಾಜಧಾನಿಯಲ್ಲಿ ಇದರ ಅನುಭವವಾಗಿತ್ತು. ನೇಪಾಳದಲ್ಲಿ 5 ಕಿ.ಮೀ ಆಳದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿತ್ತು.
ಕೆಲದಿನಗಳ ಹಿಂದೆ ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿ 5.1 ತೀವ್ರತೆಯ ಭೂಕಂಪನ ಸಂಭವಿಸಿತ್ತು. ರಾತ್ರಿ 11.01 ಗಂಟೆಯ ಸುಮಾರಿಗೆ ಕಂಪನದ ಅನುಭವವಾಗಿತ್ತು. 20 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿತ್ತು. ಭೂಮಿ ದಿಢೀರ್ ಕಂಪಿಸಿದ್ದರಿಂದ ಭಯಗೊಂಡ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದರು.
ಅಂಡಮಾನ್ನಲ್ಲಿ ಭೂಕಂಪನ: ಇತ್ತೀಚೆಗೆ ಅಂಡಮಾನ ದ್ವೀಪದಲ್ಲಿ 4.4 ತೀವ್ರತೆ ಭೂಕಂಪ ಸಂಭವಿಸಿತ್ತು. ನಸುಕಿನ ಜಾವ 3.39 ರ ಸುಮಾರಿಗೆ ಭೂಮಿ ಕಂಪಿಸಿತ್ತು. 93 ಕಿ.ಮೀ ಆಳದಲ್ಲಿ ಇದರ ಕೇಂದ್ರಬಿಂದು ಪತ್ತೆಯಾಗಿತ್ತು.
ಇತ್ತೀಚೆಗೆ ಮೊರಾಕ್ಕೊದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸಾವಿರಾರು ಜನರು ಪ್ರಾಣಕಳೆದುಕೊಂಡಿದ್ದರು. ಬೃಹತ್ ಕಟ್ಟಡಗಳು ಸೇರಿದಂತೆ ವಿಶ್ವ ಪರಂಪರೆಯ ತಾಣಗಳ ಹಾನಿಯಾಗಿದ್ದವು. ಭೂಕಂಪನದ ವೇಳೆ ಸೆರೆ ಹಿಡಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಇದನ್ನೂ ಓದಿ: ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಕಂಪನ: ವಿಡಿಯೋ