ನವದೆಹಲಿ: ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟ ಎರಡು ತಿಂಗಳ ಬಳಿಕ ಇದೀಗ ಪರಿಸ್ಥಿತಿ ಸುಧಾರಿಸಿಕೊಳ್ಳುತ್ತಿದ್ದು, ಕೆನಡಾ ಪ್ರಜೆಗಳಿಗೆ ಎಲೆಕ್ಟ್ರಾನಿಕ್ ವೀಸಾ ಸೇವೆಯನ್ನು ಕೇಂದ್ರ ಸರ್ಕಾರ ಪುನರಾರಂಭಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ವರ್ಚುವಲ್ ಜಿ20 ನಾಯಕರ ಶೃಂಗಸಭೆ ಮುಕ್ತಾಯದ ನಂತರ ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಜೈಶಂಕರ್, ಇದಕ್ಕೂ ಮುನ್ನ ಕೆನಡಾದಲ್ಲಿನ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ರಾಜತಾಂತ್ರಿಕರಿಗೆ ಅಗತ್ಯವಾದ ಕೆಲಸವನ್ನು ಮಾಡಲು ಕಷ್ಟಕರವಾದ ಹಿನ್ನೆಲೆಯಲ್ಲಿ ನಾವು ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೆವು. ಆದರೆ, ಸದ್ಯದ ಪರಿಸ್ಥಿತಿ ಉತ್ತಮವಾಗಿದೆ. ವೀಸಾ ಸೇವೆಗಳನ್ನು ಕ್ರಮೇಣ ಮರುಪ್ರಾರಂಭಿಸಲು ಸಾಧ್ಯವಿದೆ ಎಂದು ನಾವು ಕಂಡುಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಅನೇಕ ವಿಭಾಗಗಳಲ್ಲಿ ಭೌತಿಕ ವೀಸಾ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.
"ಅರ್ಹ ಕೆನಡಾ ನಾಗರಿಕರಿಗೆ ಭಾರತವು ಎಲೆಕ್ಟ್ರಾನಿಕ್ ವೀಸಾ ಸೇವೆಗಳನ್ನು ಮತ್ತೆ ಆರಂಭಿಸಿದೆ ಎಂದು ಕೆನಡಾದಲ್ಲಿರುವ ಭಾರತೀಯ ಹೈಕಮಿಷನ್ ಬುಧವಾರ ಪ್ರಕಟಿಸಿದೆ. ಈ ಕುರಿತು ಅಧಿಸೂಚನೆ ಹೊರಡಿಸಿರುವ ಭಾರತೀಯ ಹೈಕಮಿಷನ್, "ನಿಯಮಿತ/ಸಾಮಾನ್ಯ ಕೆನಡಾದ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಎಲ್ಲಾ ಅರ್ಹ ಕೆನಡಾದ ನಾಗರಿಕರಿಗೆ ನವೆಂಬರ್ 22, 2023ರಿಂದ ಜಾರಿಗೆ ಬರುವಂತೆ ಭಾರತೀಯ ಇ-ವಿಸಾ ಸೌಲಭ್ಯವನ್ನು ಮರುಸ್ಥಾಪಿಸಲಾಗಿದೆ" ಎಂದು ಹೇಳಿದೆ.
ಇದನ್ನೂ ಓದಿ: Explained: 'ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ' : ಕೆನಡಾದ ರಾಜತಾಂತ್ರಿಕರನ್ನು ಹೊರಗಿಡಲು ಭಾರತ ಬಯಸಿದ್ದೇಕೆ?
ಆರ್ಹರು ಅಸ್ತಿತ್ವದಲ್ಲಿರುವ ವಿಧಾನಗಳ ಪ್ರಕಾರ ನಿಯಮಿತ ಕಾಗದದ ವೀಸಾಕ್ಕೆ ಅರ್ಜಿ ಸಲ್ಲಿಸಬೇಕು. ಭಾರತದ ಹೈಕಮಿಷನ್, ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ, ಟೊರೊಂಟೊ ಮತ್ತು ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ, ವ್ಯಾಂಕೋವರ್, ಒಟ್ಟಾವಾ ವೆಬ್‌ಸೈಟ್‌ಗಳಲ್ಲಿ ಈ ಕುರಿತಾದ ವಿವರಗಳನ್ನು ಕಾಣಬಹುದು. ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ವಿವಾದದ ನಡುವೆ ಇ-ವೀಸಾ ಸೇವೆಯನ್ನು ಮರುಸ್ಥಾಪಿಸುವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: 5 ಲಕ್ಷ ವಲಸಿಗರಿಗೆ ವೀಸಾ ನೀಡಲಿದೆ ಕೆನಡಾ ; ಭಾರತೀಯರಿಗೆ ಅತ್ಯಧಿಕ ಲಾಭ!
ಪ್ರಕರಣವೇನು?: ಸೆಪ್ಟೆಂಬರ್‌ನಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಸಂಬಂಧ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅದಾದ ಬಳಿಕ ಎರಡು ದೇಶಗಳ ರಾಜತಾಂತ್ರಿಕ ಸಂಬಂಧ ಹದಗೆಟ್ಟಿತ್ತು. ಎರಡೂ ದೇಶಗಳಿಂದ ರಾಯಭಾರಿಗಳು ಹಾಗೂ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಲಾಗಿತ್ತು. ಕೆನಡಾದ ಭದ್ರತಾ ಏಜೆನ್ಸಿಗಳು ಭಾರತೀಯ ಸರ್ಕಾರಿ ಏಜೆಂಟ್‌ಗಳು ಮತ್ತು ನಿಜ್ಜರ್ ಸಾವಿನ ನಡುವಿನ ಸಂಬಂಧವನ್ನು ತನಿಖೆ ನಡೆಸುತ್ತಿವೆ, ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ಕೈವಾಡವಿದೆ ಎಂದು ಜಸ್ಟಿನ್ ಟ್ರುಡೊ ಆರೋಪಿಸಿದ್ದರು.
ಇದನ್ನೂ ಓದಿ: ರಾಜತಾಂತ್ರಿಕ ಉದ್ವಿಗ್ನತೆಯ ಮಧ್ಯೆಯೇ ಭಾರತದಿಂದ 41 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದ ಕೆನಡಾ