ನವದೆಹಲಿ: ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಜತೆ ಇಂದು ಭಾರತೀಯ ವಿದೇಶಾಂಗ ಸಚಿವ ಜೈ ಶಂಕರ್ ಮಾತುಕತೆ ನಡೆಸುವ ಸಾಧ್ಯತೆ ಇದೆ. ಶಾಂಘೈ ಸಹಕಾರ ಸಂಘಟನೆ ಸಭೆಯಲ್ಲಿ ಉಭಯ ಸಚಿವರು ದ್ವಿಪಕ್ಷೀಯ ಸಂಬಂಧಗಳ ಬಲವರ್ದನೆ ಸಂಬಂಧ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಭೆ ಇಬ್ಬರೂ ಸಚಿವರ ನಡುವೆ ನಡೆಯುತ್ತಿರುವ ಎರಡನೇ ಮಾತುಕತೆ ಆಗಲಿದೆ. ಪ್ಯಾಂಗಾಂಗ್ನಲ್ಲಿ ಎರಡು ರಾಷ್ಟ್ರಗಳ ನಡುವೆ 2020ರ ಮೇನಲ್ಲಿ ನಡೆದ ಸಂಘರ್ಷದ ಹಿನ್ನೆಲೆಯಲ್ಲಿ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಮಾಸ್ಕೋದಲ್ಲಿ ಜೈ ಶಂಕರ್ ಹಾಗೂ ವಾಂಗ್ ಯಿ ನಡುವೆ ಮಾತುಕತೆ ನಡೆದಿತ್ತು. ಈ ಮಾತುಕತೆ ಬಳಿಕ ಉಭಯ ರಾಷ್ಟ್ರಗಳ ನಡುವೆ ಇದ್ದ ತ್ವೇಷಮಯ ವಾತಾವರಣ ತಿಳಿಗೊಂಡಿತ್ತು.
ಜೂನ್ 2020 ರಲ್ಲಿ, ಜೈಶಂಕರ್ ಚೀನಾದ ಸಹವರ್ತಿ ವಾಂಗ್ಯಿ ಗೆ ಕಠಿಣ ಸಂದೇಶ ರವಾನಿಸಿದ್ದರು. ಎರಡೂ ರಾಷ್ಟ್ರಗಳ ನಡುವಣ ಮಾತುಕತೆ ನಡುವೆಯೂ ಚೀನಾ ಏನಾದರೂ ಅಡ್ಡದಾರಿ ಹಿಡಿದರೆ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಭಾರತ ನೇರ ಎಚ್ಚರಿಕೆ ನೀಡಿತ್ತು. ಶಾಂತಿ ಮರುಸ್ಥಾಪಿಸಲು ಚೀನಾ ಸರಿಯಾದ ಹೆಜ್ಜೆ ಇಡಬೇಕು ಎಂಬ ಸಂದೇಶವನ್ನು ಜೈ ಶಂಕರ್ ರವಾನಿಸಿದ್ದರು.
ಲಡಾಖ್ನಲ್ಲಿ ಭಾರತ- ಚೀನಾ ವಾಸ್ತವ ಗಡಿ ರೇಖೆಯಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ವೀರಮರಣವನ್ನಪ್ಪಿದ್ದರು. ಇನ್ನು ಚೀನಾದ ಕಡೆ 43 ಮಂದಿ ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು. ಆದರೆ, ಚೀನಾ ಸಾವು - ನೋವಿನ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.