ವಾಷಿಂಗ್ಟನ್(ಅಮೆರಿಕ): 2019ರ ಲೋಕಸಭಾ ಚುನಾವಣೆಯಲ್ಲಿ ನಗರಗಳಲ್ಲಿನ ಮಧ್ಯಮ ವರ್ಗದ ಜನರನ್ನು ಆಕರ್ಷಿಸಲು ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲು ಟ್ವಿಟರ್ ಬಳಸಿಕೊಂಡಿದ್ದರು ಎಂದು ಎನ್ಆರ್ಐ ಪ್ರಾಧ್ಯಾಪಕರ ನೇತೃತ್ವದ ತಂಡವೊಂದು ನಡೆಸಿದ ಅಧ್ಯಯನವೊಂದು ಬಹಿರಂಗಪಡಿಸಿದೆ.
ಅಮೆರಿಕದ ಅಂತಾರಾಷ್ಟ್ರೀಯ ಸಂವಹನ ಸಂಶೋಧನಾ ಜರ್ನಲ್ನಲ್ಲಿ ಈ ಸಂಶೋಧನೆ ಪ್ರಕಟವಾಗಿದೆ. ಈ ಸಂಶೋಧನೆಯು ಭಾರತದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಟ್ವಿಟರ್ ಅನ್ನು ಹೇಗೆ ಬಳಸಿಕೊಳ್ಳಲಾಯಿತು ಎಂಬ ಬಗ್ಗೆ ಮಾಹಿತಿ ನೀಡಿದೆ.
2019ರ ಲೋಕಸಭಾ ಚುನಾವಣೆಯಲ್ಲಿ 74 ದಿನಗಳ ಪ್ರಚಾರದ ಸಮಯದಲ್ಲಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಟ್ವಿಟರ್ ಅನ್ನು ಹೇಗೆ ಬಳಸಿದ್ದಾರೆ ಎಂಬುದನ್ನು ಅಧ್ಯಯನ ಮಾಡುವುದು ನಮ್ಮ ಗುರಿಯಾಗಿತ್ತು ಎಂದು ಅಮೆರಿಕದ ಮಿಸೌರಿಯ ಪಾರ್ಕ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮತ್ತು ಸಂಶೋಧನೆಯ ಪ್ರಮುಖ ಲೇಖಕ ಅಭಿಜಿತ್ ಮಜುಂದಾರ್ ಸ್ಪಷ್ಟನೆ ನೀಡಿದ್ದಾರೆ.
'ಗೆಲ್ಲಲು ಟ್ವೀಟ್ ಮಾಡುವುದು: ಭಾರತದ 2019ರ ರಾಷ್ಟ್ರೀಯ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮದ ಬಳಕೆಯ ವಿಶ್ಲೇಷಣೆ' ಎಂಬ ಶೀರ್ಷಿಕೆಯ ಈ ಸಂಶೋಧನಾ ಬರಹವನ್ನು ಮೂವರು ಬರೆದಿದ್ದಾರೆ. ಅಭಿಜಿತ್ ಜೊತೆಗೆ ಭಾವನಾ ವಾಲ್ ಮತ್ತು ಉಮಾನಾ ಅಂಜಲಿನ್ ಈ ಸಂಶೋಧನಾ ಬರಹದ ಲೇಖಕರಾಗಿದ್ದಾರೆ.
ಭಾವನಾ ವಾಲ್, ಉತ್ತರಪ್ರದೇಶದ ಶ್ರೀ ರಾಮಸ್ವರೂಪಿ ಸ್ಮಾರಕ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ಮತ್ತು ಮಾನವಿಕ ವಿಭಾಗದಲ್ಲಿ ಡಾಕ್ಟರೇಟ್ ವಿದ್ಯಾರ್ಥಿಯಾಗಿದ್ದಾರೆ. ಉಮನಾ ಅಂಜಲಿನ್ ಅಮೆರಿಕದ ಟೆನ್ನೆಸ್ಸೀ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಅಡ್ವರ್ಟೈಸಿಂಗ್ & ಪಬ್ಲಿಕ್ ರಿಲೇಶನ್ಸ್ನ ಹಳೆ ವಿದ್ಯಾರ್ಥಿಯಾಗಿದ್ದಾರೆ.
ಈ ತಂಡವು ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅವರು ಮಾಡಿರುವ ಟ್ವೀಟ್ಗಳನ್ನು NVivo ತಂತ್ರಜ್ಞಾನವನ್ನು ಬಳಸಿಕೊಂಡು ಪರಿಮಾಣಾತ್ಮಕ ಮತ್ತು ಗುಣಾತ್ಮಕ ವಿಶ್ಲೇಷಣೆಗೆ ಒಳಪಡಿಸಲಾಗಿದೆ ಎಂದು ಮಾಧ್ಯಮ ಪ್ರಕಟಣೆವೊಂದು ತಿಳಿಸಿದೆ.
ಟ್ವೀಟ್ಗಳ ವಿಶ್ಲೇಷಣೆ...
ಪ್ರಧಾನಿ ಮೋದಿ ದೇಶಾದ್ಯಂತ ಬಿಜೆಪಿ ಚುನಾವಣಾ ಪ್ರಚಾರಗಳು ಮತ್ತು ಘಟನೆಗಳ ಬಗ್ಗೆ ಮಾತನಾಡಲು ಶೇಕಡಾ 41ರಷ್ಟು ಟ್ವೀಟ್ಗಳನ್ನು ಮಾಡಿದ್ದಾರೆ. ತಮ್ಮ ರಾಜಕೀಯ ವಿರೋಧಿಗಳನ್ನು ತೆಗಳಲು ಶೇಕಡಾ 17ರಷ್ಟು ಟ್ವೀಟ್ಗಳನ್ನು ಮಾಡಿದ್ದಾರೆ ಎಂದು ಮಜುಂದಾರ್ ಹೇಳಿದ್ದಾರೆ.
ಬಿಜೆಪಿ ಚುನಾವಣಾ ಪ್ರಚಾರಗಳು ಮತ್ತು ಘಟನೆಗಳ ಬಗ್ಗೆ ಮಾತನಾಡಲು ಮೋದಿ ಹೆಚ್ಚಿನ ಟ್ವೀಟ್ಗಳನ್ನು ಬಳಸಿಕೊಂಡಿರುವುದು ಆಶ್ಚರ್ಯವೇನಲ್ಲ. ಬಿಜೆಪಿ ಭಾರತದ ಅತಿದೊಡ್ಡ ರಾಜಕೀಯ ಪಕ್ಷವಾಗಿದ್ದು, ಪ್ರಚಾರದ ಸಮಯದಲ್ಲಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲು ಇದು ಅನಿವಾರ್ಯವಾಗಿದೆ ಎಂದು ಮಜುಂದಾರ್ ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯತೆ ಬಗ್ಗೆಯೂ ಸಂದೇಶ ನೀಡಲು ಮೋದಿ ಟ್ವೀಟ್ಗಳನ್ನು ಬಳಸಿಕೊಂಡಿದ್ದಾರೆ. ಪಾಕಿಸ್ತಾನದ ಭಯೋತ್ಪಾದನೆ, ಭಾರತದ ಪರಾಕ್ರಮ ಮುಂತಾದ ವಿಚಾರಗಳನ್ನು ಉಲ್ಲೇಖಿಸಿ ಮೋದಿ ಶೇಕಡಾ 13ರಷ್ಟು ಟ್ವೀಟ್ ಮಾಡಿದ್ದಾರೆ.
ಚುನಾವಣಾ ಪ್ರಚಾರದ ವೇಳೆಯಲ್ಲಿ ದಿನಕ್ಕೆ ಸರಾಸರಿ 10 ಟ್ವೀಟ್ಗಳನ್ನು ಮೋದಿ ಮಾಡುತ್ತಿದ್ದರು ಎಂದು ಅಧ್ಯಯನ ವರದಿಯು ತಿಳಿಸಿದೆ. ಜೊತೆಗೆ ಪ್ರಧಾನಿ ಮೋದಿ ತುಂಬಾ ಪರಿಣಾಮಕಾರಿಯಾಗಿ ಈ ಟ್ವಿಟರ್ ಅನ್ನು ಬಳಸಿಕೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮಾಜಿ ಸಚಿವ, ಬಿಜೆಪಿ ಮುಖಂಡನ ಕೊಲೆ..?