ಧೋಲ್ಪುರ್(ರಾಜಸ್ಥಾನ) : ದಸರಾ ಹಬ್ಬದ ಪ್ರಯುಕ್ತ ದುರ್ಗಾದೇವಿ ಮೂರ್ತಿ ನಿಮಜ್ಜನ ವೇಳೆ ಐವರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಈಗಾಗಲೇ ನಾಲ್ವರ ಮೃತದೇಹ ಹೊರ ತೆಗೆಯಲಾಗಿದೆ. ಮತ್ತೊಂದು ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.
ರಾಜಸ್ಥಾನದ ಧೋಲ್ಪುರ್ದ ಭೂತೇಶ್ವರದ ಸಮೀಪದಲ್ಲಿನ ಪಾರ್ವತಿ ನದಿಯಲ್ಲಿ ದುರ್ಗಾಪೂಜೆ ಮೂರ್ತಿ ನಿಮಜ್ಜನ ಮಾಡಲು 10ಕ್ಕೂ ಹೆಚ್ಚು ಜನರು ತೆರಳಿದ್ದರು. ಈ ವೇಳೆ ಐವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಇವರೆಲ್ಲರೂ ಉತ್ತರಪ್ರದೇಶದ ಆಗ್ರಾದ ಭಾವಪುರ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ನದಿಯಲ್ಲಿ ಮೂರ್ತಿ ವಿಸರ್ಜನೆ ಮಾಡ್ತಿದ್ದ ಸಂದರ್ಭದಲ್ಲಿ ಪ್ರವಾಹಕ್ಕೆ ಸಿಲುಕಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿರಿ: ವಿಜಯದಶಮಿಯಂದೇ ಭೀಕರ ರಸ್ತೆ ಅಪಘಾತ : 11 ಮಂದಿ ದುರ್ಮರಣ
ಮೃತರನ್ನ ರವಿ(26), ರಣವೀರ್(24), ಸತ್ಯಪ್ರಕಾಶ್(24), ಕೃಷ್ಣ(21) ಹಾಗೂ ಸಂದೀಪ್(27) ಎಂದು ಗುರುತಿಸಲಾಗಿದೆ. ಈಗಾಗಲೇ ಹೊರ ತೆಗೆಯಲಾಗಿರುವ ನಾಲ್ವರ ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ.
ಮತ್ತೊಂದು ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ದಸರಾ ಸಂದರ್ಭದಲ್ಲೇ ಉತ್ತರಪ್ರದೇಶದಲ್ಲಿ 11 ಹಾಗೂ ಛತ್ತೀಸ್‌ಗಢದಲ್ಲಿ ನಾಲ್ವರು ತಮ್ಮ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.