ಜಲಂಧರ್ (ಪಂಜಾಬ್) : ಜಲಂಧರ್ ನಗರದ ಪಠಾಣ್‌ಕೋಟ್ ಹೆದ್ದಾರಿಯ ಕಾನ್ಪುರದಲ್ಲಿ ಮೂವರು ಸಹೋದರಿಯರ ಶವಗಳು ಮನೆಯ ಹೊರಗೆ ಕಬ್ಬಿಣದ ಟ್ರಂಕ್‌ನಲ್ಲಿ ಬೀಗ ಹಾಕಿದ ಸ್ಥಿತಿಯಲ್ಲಿ ಇಂದು ಮುಂಜಾನೆ ಪತ್ತೆಯಾಗಿದೆ. ಭಾನುವಾರ ರಾತ್ರಿ 8 ಗಂಟೆಯಿಂದ ಸಹೋದರಿಯರು ನಾಪತ್ತೆಯಾಗಿದ್ದರು. ಪ್ರಕರಣದ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಮುಖವಿಂದರ್ ಸಿಂಗ್, "ಕುಡುಕ ತಂದೆಯೇ ಮೂವರು ಸಹೋದರಿಯರ ಕೊಲೆ ಮಾಡಿದ್ದಾನೆ" ಎಂದು ತಿಳಿಸಿದರು. ಆರೋಪಿ ಸುನೀಲ್ ಮಂಡಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆಯಲ್ಲಿ ಆರೋಪಿ ತನ್ನ ದುಷ್ಕೃತ್ಯ ಒಪ್ಪಿಕೊಂಡಿದ್ದು, ಬಡತನದಿಂದ ಬೇಸತ್ತು ಮೂವರು ಪುತ್ರಿಯರಾದ ಅಮೃತಾ ಕುಮಾರಿ (9), ಕಾಂಚನ್ ಕುಮಾರಿ (7) ಮತ್ತು ವಾಸು ಎಂಬವರನ್ನು ಕೊಂದಿರುವುದಾಗಿ ಹೇಳಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುನೀಲ್ ಮಂಡಲ್ ಮಾದಕ ವ್ಯಸನಿಯಾಗಿದ್ದು, ಆಗಾಗ್ಗೆ ಮದ್ಯದ ಅಮಲಿನಲ್ಲೇ ಇರುತ್ತಿದ್ದನಂತೆ. ಆರೋಪಿ ಬಾಲಕಿಯರಿಗೆ ವಿಷಪೂರಿತ ಔಷಧ ನೀಡಿ ಕಬ್ಬಿಣದ ಟ್ರಂಕ್‌ನಲ್ಲಿ ಕೂಡಿ ಹಾಕಿ, ಬೀಗ ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಮುಚ್ಚಿದ ಟ್ರಂಕ್‌ನಲ್ಲಿ ಶವಗಳು ಪತ್ತೆ: ಮುಂಜಾನೆ ಹುಡುಗಿಯರ ಶವ ಮನೆಯ ಹೊರಗಿದ್ದ ಟ್ರಂಕ್‌ನಲ್ಲಿ ಬಿದ್ದಿರುವುದನ್ನು ಜನ ನೋಡಿದ್ದಾರೆ. ಜನರು ಟ್ರಂಕ್ ತೆರೆದಾಗ ಅದರೊಳಗೆ ಶವ ಕಂಡುಬಂದಿದೆ. ಸುನೀಲ್ ಮಂಡಲ್ ಮತ್ತು ಮಂಜು ಮಂಡಲ್ ದಂಪತಿಗೆ ಐವರು ಮಕ್ಕಳಿದ್ದಾರೆ ಎಂದು ಮಕ್ಸೂದ್ ಪೊಲೀಸ್ ಠಾಣೆಯ ಎಎಸ್‌ಐ ಹರ್ಬನ್ಸ್ ಸಿಂಗ್ ತಿಳಿಸಿದರು. ಭಾನುವಾರ ಇಬ್ಬರೂ ಕೆಲಸಕ್ಕೆ ಹೋಗಿದ್ದಾರೆ. ರಾತ್ರಿ 8 ಗಂಟೆಗೆ ಮನೆಗೆ ಹಿಂತಿರುಗಿದಾಗ ಬಾಲಕಿಯರು ಕಾಣಲಿಲ್ಲ. ರಾತ್ರಿಯಿಡೀ ಹುಡುಕಾಡಿದರೂ ಪತ್ತೆಯಾಗಲಿಲ್ಲ. ನಂತರ ಪೊಲೀಸರಿಗೆ ದೂರು ನೀಡಿದ್ದಾರೆ. ಕೊಲೆ ಪ್ರಕರಣ ಬಹಿರಂಗವಾದ ನಂತರ ಸಂಬಂಧಿಕರು ತೀವ್ರ ಆಘಾತಕ್ಕೊಳಗಾಗಿದ್ದಾರೆ.
95 ವರ್ಷದ ಹೆತ್ತವ್ವನ ಕೊಂದು ಸುಟ್ಟು ಹಾಕಿದ ಪುತ್ರ: ಪಾಪಿ ಮಗನೋರ್ವ ತನ್ನ 95 ವರ್ಷದ ಹೆತ್ತ ತಾಯಿಯನ್ನೇ ಬೆಂಕಿ ಹಚ್ಚಿ ಕೊಲೆಗೈದಿರುವ ಹೃದಯ ವಿದ್ರಾವಕ ಘಟನೆ ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ನಡೆದಿದೆ. ಕಳೆದ ಶನಿವಾರ ತಡರಾತ್ರಿ ಜಿಲ್ಲೆಯ ಬಡಿಮುಂಡ ಗ್ರಾಮದ ಖಜುರಿಸಾಹಿ ಎಂಬಲ್ಲಿ ಘಟನೆ ನಡೆದಿದೆ. ಮೃತರನ್ನು ಮಂಜುಳಾ ನಾಯಕ್ (95) ಎಂದು ಗುರುತಿಸಲಾಗಿದೆ. ಆರೋಪಿ ಸಮೀರ್ ನಾಯಕ್ನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಶನಿವಾರ ತಡರಾತ್ರಿ ಆರೋಪಿ ಸಮೀರ್ ನಾಯಕ್ ಮನೆಗೆ ಬಂದಿದ್ದ. ಈ ವೇಳೆ ತಾಯಿ ಮಂಜುಳಾ ನಾಯಕ್ ಜೊತೆ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆದಿದೆ. ಆರೋಪಿ ಕೋಪಗೊಂಡು ತಾಯಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಬಳಿಕ ದುಷ್ಕೃತ್ಯದಿಂದ ಪಾರಾಗಲು ಸಾಕ್ಷ್ಯಗಳನ್ನು ನಾಶಪಡಿಸಲು ಮನೆಯೊಳಗೆ ತಾಯಿಯ ಶವಕ್ಕೆ ಬೆಂಕಿ ಹಚ್ಚಿದ್ದಾನೆ.
ಮನೆಯಲ್ಲಿ ತಡರಾತ್ರಿ ಬೆಂಕಿ ಉರಿಯುತ್ತಿರುವುದನ್ನು ಕಂಡ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿದ್ದಾರೆ. ಜೊತೆಗೆ ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಈ ವೇಳೆ ಬೆಂಕಿ ಸಿಲುಕಿ ಮೃತಪಟ್ಟಿದ್ದ ಮಹಿಳೆಯ ಮೃತದೇಹವನ್ನು ಟಿಕಬಾಲಿ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಜೊತೆಗೆ ಕೃತ್ಯ ಎಸಗಿದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: 95 ವರ್ಷದ ಹೆತ್ತವ್ವನ ಕೊಂದು ಸುಟ್ಟು ಹಾಕಿದ ಪುತ್ರ