ನವದೆಹಲಿ: ವಿಮಾನದಲ್ಲಿ ಕುಡಿತದ ನಶೆಯ ಯಡವಟ್ಟುಗಳ ಸರಣಿ ಮುಂದುವರಿದಿದೆ. ಪಾನಮತ್ತನಾಗಿದ್ದ ಪ್ರಯಾಣಿಕನೊಬ್ಬ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನಿಸಿದ ಘಟನೆ ನಡೆದಿದೆ. ಆತನ ಮೇಲೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಯಾಣಿಕ ಪ್ರತೀಕ್ ವಿರುದ್ಧ ದೂರು ದಾಖಲಾಗಿದೆ. ಆರೋಪಿ ಉತ್ತರಪ್ರದೇಶದ ಕಾನ್ಪುರ ಮೂಲದವರೆಂದು ತಿಳಿದು ಬಂದಿದೆ.
ಶುಕ್ರವಾರ ಬೆಳಗ್ಗೆ 7:56 ಕ್ಕೆ ದಿಲ್ಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ 6E 308 ಸಂಖ್ಯೆಯ ಇಂಡಿಗೋ ವಿಮಾನ ಬೆಂಗಳೂರಿನತ್ತ ಹಾರಾಟ ನಡೆಸಿತು. ಈ ವೇಳೆ, 40 ವರ್ಷದ ಪ್ರಯಾಣಿಕನೊಬ್ಬ ಪಾನಮತ್ತನಾಗಿ ಹಾರಾಟದ ಮಧ್ಯೆಯೇ ವಿಮಾನದ ಎಮರ್ಜೆನ್ಸಿ ಡೋರ್(ತುರ್ತು ಬಾಗಿಲು) ತೆರೆಯಲು ಮುಂದಾಗಿದ್ದಾನೆ. ಇದನ್ನು ಗುರುತಿಸಿದ ಸಿಬ್ಬಂದಿ ತಕ್ಷಣವೇ ಆತನನ್ನು ತಡೆದಿದ್ದಾರೆ.
ಆತನನ್ನು ನಿಗದಿತ ಆಸನಕ್ಕೆ ಕರೆತಂದು ಕೂರಿಸಿ, ಆಗಬಹುದಾದ ಅವಾಂತರವನ್ನು ತಪ್ಪಿಸಿದ್ದಾರೆ. ಬಳಿಕ ವಿಮಾನದ ಕ್ಯಾಪ್ಟನ್ಗೆ ಮಾಹಿತಿ ನೀಡಲಾಯಿತು. ಪ್ರಯಾಣಿಕನಿನೂ ಸೂಕ್ತ ಎಚ್ಚರಿಕೆ ನೀಡಲಾಯಿತು. ವಿಮಾನ ಮತ್ತು ಪ್ರಯಾಣಿಕರ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ವಿಮಾನಯಾನ ಸಂಸ್ಥೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಪ್ರಯಾಣಿಕನನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್‌ಎಫ್) ಹಸ್ತಾಂತರಿಸಲಾಯಿತು. ಸಹ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ತಂದ ಆರೋಪದ ಮೇಲೆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ವಿಮಾನಗಳಲ್ಲಿ ಈ ವರ್ಷದಲ್ಲಿ ನಡೆದ 9ನೇ ಕಹಿ ಘಟನೆ ಇದಾಗಿದೆ. ಅಶಿಸ್ತಿನ ವರ್ತನೆ, ಮದ್ಯ ಸೇವನೆ, ಶೌಚಾಲಯದಲ್ಲಿ ಧೂಮಪಾನ, ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆಯಂತಹ ಘಟನೆಗಳು ನಡೆದಿದ್ದವು. ಈಚೆಗೆ ವ್ಯಕ್ತಿಯೊಬ್ಬ ಲಂಡನ್- ಮುಂಬೈ ವಿಮಾನದ ತುರ್ತು ಬಾಗಿಲನ್ನು ಪ್ರಯಾಣದ ವೇಳೆಯೇ ತೆರೆಯಲು ಪ್ರಯತ್ನಿಸಿದ್ದು, ಆತನನ್ನು ಬಂಧಿಸಲಾಗಿತ್ತು.
ಹಿಂದಿನ ಘಟನೆಗಳು: ಇಂಡಿಗೋ ವಿಮಾನದಲ್ಲಿ ಮದ್ಯಸೇವನೆ ನಿಷೇಧ ಮಾಡಲಾಗಿದೆ. ಆದಾಗ್ಯೂ ಪ್ರಯಾಣಿಕರು ಕುಡಿದು ಬಂದು ವಿಮಾನದಲ್ಲಿ ಕಿರಿಕ್ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹಾರಾಟದ ವೇಳೆ ಸಹ ಮಹಿಳಾ ಪ್ರಯಾಣಿಕರ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಸುದ್ದಿ ಭಾರೀ ಸದ್ದು ಮಾಡಿತ್ತು. ಘಟನೆಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದರಿಂದ ಮುಜುಗರಕ್ಕೀಡಾಗಿದ್ದ ವಿಮಾನಯಾನ ಸಂಸ್ಥೆ ವಿಮಾನದೊಳಗೆ ಮದ್ಯಪಾನ ನಿಷೇಧಿಸಿ ಆದೇಶಿಸಿತ್ತು.
ಆದರೆ, ಪ್ರಯಾಣಿಕರು ಪಾನಮತ್ತರಾಗಿಯೇ ವಿಮಾನ ಪ್ರಯಾಣ ನಡೆಸಿ, ಅವಾಂತರ ಸೃಷ್ಟಿಸುತ್ತಿರುವುದು ಹೆಚ್ಚಾಗಿದೆ. ಈಚೆಗೆಗಷ್ಟೇ ದುಬೈನಿಂದ ಮುಂಬೈಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಇಬ್ಬರು ಪ್ರಯಾಣಿಕರು ಸಿಬ್ಬಂದಿ ಜೊತೆಗೆ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿತ್ತು. ಪ್ರಕರಣ ದಾಖಲಿಸಿ ಇಬ್ಬರನ್ನೂ ಬಂಧಿಸಲಾಗಿತ್ತು.
ಮಹಾರಾಷ್ಟ್ರದ ಪಾಲ್ಘರ್ ಮತ್ತು ಕೊಲ್ಹಾಪುರಕ್ಕೆ ಸೇರಿದ್ದ ಇಬ್ಬರು ವ್ಯಕ್ತಿಗಳು, ದುಬೈನಲ್ಲಿ 1 ವರ್ಷದಿಂದ ವಾಸವಾಗಿದ್ದರು. ತವರಿಗೆ ಮರಳುತ್ತಿದ್ದ ವೇಳೆ ಕುಡಿದ ನಶೆಯಲ್ಲಿ ವಿಮಾನದಲ್ಲಿ ಸಹ ಪ್ರಯಾಣಿಕರ ಜೊತೆಗೆ ತಗಾದೆ ತೆಗೆದಿದ್ದರು. ಮಧ್ಯಪ್ರವೇಶಿಸಿದ ವಿಮಾನ ಸಿಬ್ಬಂದಿಯನ್ನೂ ಅವರು ನಿಂದಿಸಿದ್ದರು.
ಇನ್ನೊಂದು ಪ್ರಕರಣದಲ್ಲಿ ಬ್ಯಾಂಕಾಕ್ನಿಂದ ಮುಂಬೈಗೆ ತೆರಳುತ್ತಿದ್ದ ವಿಮಾನದಲ್ಲಿ ಸ್ವೀಡನ್ ಪ್ರಯಾಣಿಕನೊಬ್ಬ ಕ್ಯಾಬಿನ್ ಸಿಬ್ಬಂದಿಗೆ ಕಿರುಕುಳ ನೀಡಿದ್ದ ಆರೋಪದ ಮೇಲೆ ಬಂಧಿಸಲಾಗಿತ್ತು.
ಓದಿ: ಕುಡಿದ ಮತ್ತಿನಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ; ವಿಮಾನಯಾನದಲ್ಲಿ ಮತ್ತೊಂದು ದುರ್ವರ್ತನೆ!