ನವದೆಹಲಿ: ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ದೇಶದ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಇಂದು ಭಾರತದ '15ನೇ ರಾಷ್ಟ್ರಪತಿ'ಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಬೆಳಗ್ಗೆ 10-15ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ.
ಮುರ್ಮು ಅವರನ್ನು ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸೆಂಟ್ರಲ್ ಹಾಲ್‌ಗೆ ಕರೆದೊಯ್ಯಲಿದ್ದಾರೆ. ದ್ರೌಪದಿ ಮುರ್ಮು ಅಲ್ಲಿಗೆ ಬಂದ ನಂತರ, ಸೆಂಟ್ರಲ್ ಹಾಲ್‌ನಲ್ಲಿ ರಾಷ್ಟ್ರಗೀತೆ ಮೊಳಗುತ್ತದೆ. ನಂತರ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಸಮ್ಮುಖದಲ್ಲಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಸ್ವೀಕರಿಸುವರು.
1. 21 ಗನ್ ಸೆಲ್ಯೂಟ್ ಗೌರವ: ಸೇನಾ ಸಿಬ್ಬಂದಿ 21 ಬಾರಿ ಕುಶಾಲ ತೋಪು ಸಿಡಿಸಿದ ನಂತರ ರಾಷ್ಟ್ರಪತಿಯಾಗಿ ಆಯ್ಕೆಯಾದವರು ಪ್ರಮಾಣ ವಚನ ಸ್ವೀಕರಿಸಲಿದ್ದು, ನಂತರ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ. ಸಮಾರಂಭಕ್ಕೂ ಮುನ್ನ, ನಿರ್ಗಮಿತ ರಾಷ್ಟ್ರಪತಿಗಳು ಮತ್ತು ಹೊಸ ರಾಷ್ಟ್ರಪತಿಯಾಗಿ ಆಯ್ಕೆಯಾದವರು ವಿಧ್ಯುಕ್ತ ಮೆರವಣಿಗೆಯಲ್ಲಿ ಸಂಸತ್ತಿಗೆ ಆಗಮಿಸುತ್ತಾರೆ.
ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಸಚಿವರುಗಳು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಂಸದರು, ರಾಜತಾಂತ್ರಿಕ ಕಾರ್ಯಗಳ ಮುಖ್ಯಸ್ಥರು, ಸಂಸದರು ಮತ್ತು ಸರ್ಕಾರದ ಪ್ರಧಾನ ನಾಗರಿಕ ಮತ್ತು ಮಿಲಿಟರಿ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ ಗೆದ್ದ ದ್ರೌಪದಿ ಮುರ್ಮು.. ಅಭಿನಂದನೆ ಸಲ್ಲಿಸಿದ ಎದುರಾಳಿ ಅಭ್ಯರ್ಥಿ ಯಶವಂತ್ ಸಿನ್ಹಾ
2. ನಿರ್ಗಮಿತ ರಾಷ್ಟ್ರಪತಿಗೂ ಗೌರವ: ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸಮಾರಂಭ ಮುಕ್ತಾಯದ ನಂತರ ರಾಷ್ಟ್ರಪತಿಗಳು ರಾಷ್ಟ್ರಪತಿ ಭವನಕ್ಕೆ ತೆರಳುತ್ತಾರೆ. ಅಲ್ಲಿ ಅವರಿಗೆ ಸೇನಾ ಗೌರವ ನೀಡಲಾಗುತ್ತದೆ ಮತ್ತು ನಿರ್ಗಮಿತ ರಾಷ್ಟ್ರಪತಿಗೂ ಗೌರವ ಸಲ್ಲಿಸಲಾಗುತ್ತದೆ. ರಾಷ್ಟ್ರಪತಿ ಕೋವಿಂದ್ ಅವರು ಜು.25, 2017 ರಂದು ಐದು ವರ್ಷಗಳ ಅವಧಿಗೆ ಭಾರತದ 14ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
3. ಬುಡಕಟ್ಟು ಸಮುದಾಯದ ಮೊದಲ ಮಹಿಳೆ: 64 ವರ್ಷದ ಮುರ್ಮು ಪ್ರತಿಪಕ್ಷ ಅಭ್ಯರ್ಥಿ ಯಶವಂತ ಸಿನ್ಹಾ ಅವರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಮುರ್ಮು ರಾಷ್ಟ್ರಪತಿ ಹುದ್ದೆ ಅಲಂಕರಿಸುತ್ತಿರುವ ಬುಡಕಟ್ಟು ಸಮುದಾಯದ ಮೊದಲ ಹಾಗೂ ದೇಶದ ಎರಡನೇ ಮಹಿಳೆಯಾಗಿದ್ದಾರೆ. ಜುಲೈ 18 ರಂದು ನಡೆದ ಮತದಾನದಲ್ಲಿ ಒಟ್ಟು 4,809 ಸಂಸದರು ಮತ್ತು ಶಾಸಕರು ಮತ ಚಲಾಯಿಸಿದ್ದಾರೆ.
4. ರಾಷ್ಟ್ರಪತಿ ದೇಶದ 'ಪ್ರಥಮ ಪ್ರಜೆ': ಭಾರತದ ರಾಷ್ಟ್ರಪತಿ ರಾಷ್ಟ್ರದ ಮುಖ್ಯಸ್ಥರಾಗಿದ್ದಾರೆ. ಅವರನ್ನು ದೇಶದ 'ಪ್ರಥಮ ಪ್ರಜೆ' ಎಂದು ಪರಿಗಣಿಸಲಾಗುತ್ತದೆ. ಮಂತ್ರಿಮಂಡಲದ ಸಲಹೆಯ ಮೇರೆಗೆ ಅವರು ಕಾರ್ಯನಿರ್ವಹಿಸುವರು. ಸಂವಿಧಾನದ 60ನೇ ವಿಧಿಯ ಪ್ರಕಾರ, ಭಾರತದ ಸಂವಿಧಾನ ಮತ್ತು ಕಾನೂನನ್ನು ಎತ್ತಿಹಿಡಿಯುವುದು, ರಕ್ಷಿಸುವುದು ಮತ್ತು ಸಂರಕ್ಷಿಸುವುದು ಭಾರತದ ರಾಷ್ಟ್ರಪತಿಗಳ ಪ್ರಾಥಮಿಕ ಕರ್ತವ್ಯ. ಮುಖ್ಯ ನ್ಯಾಯಾಧೀಶರ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಇತರ ನ್ಯಾಯಾಧೀಶರನ್ನು ನೇಮಿಸುತ್ತಾರೆ.
5. ಆಯ್ಕೆ ಪ್ರಕ್ರಿಯೆ: ಭಾರತದ ರಾಷ್ಟ್ರಪತಿಯನ್ನು ಸಂಸತ್ತು ಮತ್ತು ರಾಜ್ಯ ಶಾಸಕಾಂಗದ ಚುನಾಯಿತ ಪ್ರತಿನಿಧಿಗಳು ಆಯ್ಕೆ ಮಾಡುತ್ತಾರೆ. ಚುನಾವಣಾ ಕಾಲೇಜು ಭಾರತದ ರಾಷ್ಟ್ರಪತಿಯನ್ನು ಆಯ್ಕೆ ಮಾಡುತ್ತದೆ ಮತ್ತು ಅದರ ಸದಸ್ಯರ ಪ್ರಾತಿನಿಧ್ಯವು ಅನುಪಾತದಲ್ಲಿರುತ್ತದೆ. ಭಾರತದ ರಾಷ್ಟ್ರಪತಿಗಳ ಅವಧಿ 5 ವರ್ಷಗಳು ಮತ್ತು ರಾಷ್ಟ್ರಪತಿಗಳ ಸಹಿ ಇಲ್ಲದೆ ಭಾರತದಲ್ಲಿ ಯಾವುದೇ ಕಾನೂನನ್ನು ಜಾರಿಗೆ ತರಲು ಸಾಧ್ಯವಿಲ್ಲ.
ಇದನ್ನೂ ಓದಿ: ಕೌನ್ಸಿಲರ್ನಿಂದ ಪ್ರೆಸಿಡೆಂಟ್ ಹುದ್ದೆಗೆ.. ದ್ರೌಪದಿ ಮುರ್ಮು ಭಾರತದ ಅತ್ಯಂತ ಕಿರಿಯ ಹಾಗೂ ಮೊದಲ ಬುಡಕಟ್ಟು ರಾಷ್ಟ್ರಪತಿ!