ಡೆಹ್ರಾಡೂನ್(ಉತ್ತರಾಖಂಡ): ಮೇಘಾಲಯದ ಬಳಿಕ ಉತ್ತರಾಖಂಡದಲ್ಲಿ ಡ್ರೋನ್ ಮೂಲಕ ಔಷಧ ಸಾಗಿಸುವ ತುರ್ತು ಸೇವೆಯನ್ನು ಆರಂಭಿಸಲಾಗಿದೆ. ಡೆಹ್ರಾಡೂನ್ ನಗರದಲ್ಲಿ ಡ್ರೋನ್ ಮೂಲಕ ಔಷಧ ಮತ್ತು ತುರ್ತು ವೈದ್ಯಕೀಯ ಸಲಕರಣೆಗಳನ್ನು ಡಿಜಿಟಲ್ ಹೆಲ್ತ್ ಪ್ಲಾಟ್‌ಫಾರ್ಮ್, ಟಾಟಾ 1 ಎಂಜಿ ಕಂಪನಿ ಸರಬರಾಜು ಮಾಡುತ್ತಿದೆ.
ರೇಸ್‌ಕೋರ್ಸ್, ವಸಂತ ವಿಹಾರ್ ಮತ್ತು ಕಿಶನ್‌ನಗರದಲ್ಲಿ ಇದರ ಕೇಂದ್ರಗಳನ್ನು ತೆರೆಯಲಾಗಿದೆ. ಮುಂದೆ ರಾಜ್ಯದ ವಿವಿಧೆಡೆ ಇವುಗಳ ಸಂಖ್ಯೆ ಹೆಚ್ಚಿಸಲಾಗುವುದು. ಡ್ರೋನ್‌ಗಳು 6 ಕೆಜಿ ಔಷಧಗಳನ್ನು 100 ಕಿಮೀ ವ್ಯಾಪ್ತಿಯೊಳಗೆ ತಲುಪಿಸಬಲ್ಲವು. ಡ್ರೋನ್ಗಳಲ್ಲಿ ಔಷಧಗಳ ಸಾಗಣೆಯ ಎಲ್ಲ ಸುರಕ್ಷತೆ, ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು 1ಎಂಜಿ ಕಂಪನಿ ತಿಳಿಸಿದೆ.
ಡ್ರೋನ್ ಆಧಾರಿತ ಡೆಲಿವರಿ ಸೇವೆಯು ಟ್ರಾಫಿಕ್ ಜಾಮ್‌ನಿಂದಾಗುವ ಸಮಯವನ್ನು ಉಳಿಸಬಹುದಾಗಿದೆ. ತುರ್ತು ಸೇವೆಗಳಿಗೆ ಇದು ಅತ್ಯುಪಕಾರಿಯಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಡ್ರೋನ್ ವಿತರಣಾ ಸೇವೆಯನ್ನು ಭಾರತದಲ್ಲಿ ಕಳೆದ ವರ್ಷ ಮೊದಲ ಬಾರಿಗೆ ಪರಿಚಯಿಸಲಾಯಿತು.
2021 ರ ನವೆಂಬರ್ನಲ್ಲಿ ಮೇಘಾಲಯದ ಪಶ್ಚಿಮ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಡ್ರೋನ್ ಮೂಲಕ ಯಶಸ್ವಿಯಾಗಿ ಔಷಧಗಳನ್ನು ತಲುಪಿಸಲಾಯಿತು. ಡ್ರೋನ್ 25 ನಿಮಿಷದಲ್ಲಿ 25 ಕಿಲೋಮೀಟರ್ ಕ್ರಮಿಸಿ ಇತಿಹಾಸ ಸೃಷ್ಟಿಸಿತ್ತು. ಡ್ರೋನ್ ಮೂಲಕ ಔಷಧ ಸಾಗಿಸಿದ ದೇಶದ ಮೊದಲ ರಾಜ್ಯವೆಂಬ ಖ್ಯಾತಿ ಪಡೆದಿದೆ.