ಮುಂಬೈ(ಮಹಾರಾಷ್ಟ್ರ): ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ಕಾರ್ಯಾಚರಣೆಯಿಂದ ಮಹಾರಾಷ್ಟ್ರದಲ್ಲಿ ಅಕ್ರಮ ಚಿನ್ನ ಕಳ್ಳಸಾಗಣೆ ಬಯಲಾಗಿದೆ. ಸಿನಿಮೀಯ ರೀತಿಯಲ್ಲಿ ಚಿನ್ನವನ್ನು ಕಾನೂನು ಬಾಹಿರವಾಗಿ ಸಾಗಣೆ ಮಾಡಲಾಗುತ್ತಿರುವುದರ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ದಾಳಿಮಾಡಿ ಬೃಹತ್ ಮೊತ್ತದ ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ. ವಿದೇಶದ ಪ್ರಜೆಗಳು ಕೋಡ್ ವರ್ಡ್ ಮೂಲಕ ಭಾರತಕ್ಕೆ ಚಿನ್ನವನ್ನು ತಂದು ಕೊಡುತ್ತಿದ್ದರು. ಇಬ್ಬರ ನಡುವೆ ಕೋಡ್ನಲ್ಲಿ ವ್ಯವಹರಿಸಲಾಗುತ್ತಿತ್ತು. ಸಂಪೂರ್ಣ ಸಿನಿಮಾದ ರೀತಿಯ ಪ್ರಕರಣವನ್ನು ಇಂಟೆಲಿಜೆನ್ಸ್ ಅಧಿಕಾರಿಗಳು ಭೇದಿಸಿದ್ದಾರೆ.
ದೇಶಕ್ಕೆ ಭೇಟಿ ನೀಡುವ ವಿದೇಶಿಗರ ಮೇಲೆ ಭಾರತದ ಇಂಟಲಿಜೆನ್ಸ್ ಕಣ್ಣಿಟ್ಟಿರುತ್ತದೆ. ಈ ಗಮನಿಸುವಿಕೆಯಿಂದಾಗಿ ಭಾರತಕ್ಕೆ ಸಾಗಿಸಲಾಗುತ್ತಿದ್ದ ಅಕ್ರಮ ಚಿನ್ನ ಸಾಗಣೆ ಬಗ್ಗೆ ಬೆಳಕಿಗೆ ಬಂದಿದೆ. ವಿದೇಶದೊಂದಿಗೆ ಸಂಪರ್ಕ ಇದ್ದ ಮುಂಬೈನ ದಂಧೆ ಬೆಳಕಿಗೆ ಬಂದಿದೆ. ಇದರ ಬಗ್ಗೆ ಮಾಹಿತಿ ಕಲೆ ಹಾಕಿದ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ದಾಳಿ ಮಾಡಿ ಅಕ್ರಮ ಚಿನ್ನವನ್ನು ವಶಪಡಿಸಿಕೊಂಡಿದ್ದು, ದಂಧೆ ಮಾಡುತ್ತಿದ್ದವನನ್ನು ಬಂಧಿಸಿದ್ದಾರೆ.
ಇಂಟೆಲಿಜೆನ್ಸ್ ಕಾರ್ಯಾಚರಣೆ: ಮುಂಬೈನ ಕಲ್ಬಾದೇವಿಯಲ್ಲಿ ಕಳ್ಳಸಾಗಣೆಗಾಗಿ ಚಿನ್ನ ಕರಗಿಸಿ ಸಂಸ್ಕರಣೆ ಮಾಡುತ್ತಿದ್ದ ಘಟಕಕ್ಕೆ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ತಂಡ ಭೇಟಿ ನೀಡಿ ತನಿಖೆ ನಡೆಸಿತು. ಈ ಕಾರ್ಯಾಚರಣೆಯಲ್ಲಿ 3.5 ಕೋಟಿ ಮೌಲ್ಯದ 5.8 ಕೆಜಿ ಚಿನ್ನ ಪತ್ತೆಯಾಗಿದೆ. ಡಿಆರ್‌ಐ ಸುಮಾರು 22 ಕೋಟಿ ಮೌಲ್ಯದ ಸುಮಾರು 37 ಕೆಜಿ ಚಿನ್ನ ಮತ್ತು 2.35 ಕೋಟಿ ನಗದು ವಶಪಡಿಸಿಕೊಂಡಿದೆ. ಕರಗಿಸುವ ಘಟಕದ ಉಸ್ತುವಾರಿ ಪ್ರಶಾಂತ್ ಮೋಹನ್ ಮೈಕರ್ ಅವರನ್ನು ಡಿಆರ್‌ಐ ಬಂಧಿಸಿದೆ.
ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ಅಧಿಕಾರಿಗಳು, ಡಿಆರ್‌ಐ ಅಧಿಕಾರಿಗಳು ಕಳೆದ ಕೆಲವು ತಿಂಗಳುಗಳಿಂದ ವಿದೇಶಿ ಪ್ರಜೆಗಳ ಮೂಲಕ ಭಾರತದಲ್ಲಿ ಚಿನ್ನದ ಕಳ್ಳಸಾಗಣೆ ಮಾದರಿಯನ್ನು ಅಧ್ಯಯನ ಮಾಡುತ್ತಿದ್ದರು. ಹೀಗಾಗಿ ಇವರ ಮೇಲೆ ನಿಗಾ ಇಡಲಾಗಿತ್ತು. ಕೆಲವು ವಿದೇಶಿ ಪ್ರಜೆಗಳು ನಿರಂತರವಾಗಿ ಭಾರತಕ್ಕೆ ಬರುತ್ತಿರುವುದು ಕಂಡುಬಂದಿದೆ. ಇದರಿಂದ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ವಿದೇಶಿಗರ ಚಲನವಲನದಿಂದ ಅಧಿಕಾರಿಗಳಿಗೆ ಅನುಮಾನ: ಭಾರತಕ್ಕೆ ಭೇಟಿ ನೀಡುತ್ತಿದ್ದ ವಿದೇಶದ ಕೆಲವು ಪ್ರಜೆಗಳು ಪದೇ ಪದೇ ಭೇಟಿ ನೀಡುತ್ತಿರುವುದು ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ತಂಡವನ್ನು ರಚಿಸಿ ಸೂಕ್ಷ್ಮವಾಗಿ ಇಂಟೆಲಿಜೆನ್ಸ್ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಚಿನ್ನವನ್ನು ರೂಪಾಂತರಿಸಿ ಭಾರತಕ್ಕೆ ತೆಗೆದುಕೊಂಡು ಬರುತ್ತಿದ್ದುದು ಬೆಳಕಿಗೆ ಬಂದಿದೆ. ಅಲ್ಲದೇ ಅಧಿಕಾರಿಗಳು ಕಲ್ಬಾದೇವಿಗೆ ಬಂದ ಭಾರತೀಯ ನಾಗರಿಕರ ಮಾಹಿತಿಯನ್ನೂ ಸಂಗ್ರಹಿಸಿದ್ದಾರೆ. ಈ ಮಾಹಿತಿ ಕಲೆಹಾಕಿದಾಗ ದೊಡ್ಡ ಚಿನ್ನ ಕಳ್ಳಸಾಗಣೆ ದಂಧೆ ನಡೆಯುತ್ತಿರುವುದು ತಿಳಿದು ಬಂದಿದೆ.
ಚಿನ್ನ ಕಳ್ಳಸಾಗಣೆ ಹೇಗೆ: ಚಿನ್ನದ ಪುಡಿ, ಪೇಸ್ಟ್ ಅಥವಾ ಕ್ಯಾಪ್ಸೂಲ್ಗಳಲ್ಲಿ ಚಿನ್ನವನ್ನು ರೂಪಾಂತರಿಸಿ ಕಳ್ಳ ಸಾಗಣೆ ಮಾಡುತ್ತಿದ್ದರು. ವಿದೇಶಿ ಪ್ರಜೆಗಳು ಹೊಟ್ಟೆಯಲ್ಲಿ ಬಚ್ಚಿಟ್ಟು ಈ ಕಳ್ಳಸಾಗಣೆ ಮಾಡುತ್ತಿದ್ದರು. ಈ ಚಿನ್ನವನ್ನು ಮುಂಬೈನ ನಿರ್ದಿಷ್ಟ ಸ್ಥಳವಾದ ಕಲ್ಬಾದೇವಿಗೆ ಸಾಗಿಸಲಾಗುತ್ತಿತ್ತು. ಅದನ್ನು ಸಂಸ್ಕರಿಸಿ ಮುಂಬೈ ಮತ್ತು ಇತರ ನಗರಗಳಲ್ಲಿನ ವ್ಯಾಪಾರಿಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಕುತೂಹಲಕಾರಿ ಮಾಹಿತಿ ತಿಳಿದು ಬಂದಿದೆ. ಈ ಚಿನ್ನದ ಮಾರಾಟಗಾರ ಮತ್ತು ಖರೀದಿದಾರರಿಗೆ ರಹಸ್ಯ ಸಂಕೇತವನ್ನು ನೀಡಲಾಗಿದ್ದು. ಆ ಕೋಡ್‌ನ ದೃಢೀಕರಣದ ನಂತರವೇ ವಹಿವಾಟು ನಡೆಸಲಾಗಿತ್ತಿತ್ತು.
ಇದನ್ನೂ ಓದಿ: ಅಪ್ರಾಪ್ತ ಅವಳಿ ಸಹೋದರಿಯರ ಮಾರಾಟ ಮಾಡಿದ್ದ ತಂದೆ - ಮಲತಾಯಿ: 7 ಮಂದಿ ಬಂಧನ