ನವದೆಹಲಿ/ಬೆಂಗಳೂರು: ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ DRI ಮತ್ತು ಕರ್ನಾಟಕ ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ 48 ವಿವಿಧ ಜಾತಿಗಳಿಗೆ ಸೇರಿದ 139 ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 34 ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಟ್ಟಿ ಮಾಡಲಾದ ವಿವಿಧ ಜಾತಿಯ ಪ್ರಾಣಿಗಳು ಸೇರಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಫಾರ್ಮ್‌ಹೌಸ್‌ನಿಂದ ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿಗಳು ಮತ್ತು ವಿಶೇಷ ಜಾತಿಯ ಸಸ್ಯಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 22 ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಕ್‌ನಿಂದ ಆಗಮಿಸಿದ ಮಹಿಳಾ ಪ್ರಯಾಣಿಕರು ಸೇರಿದಂತೆ ಮೂವರು ಪ್ರಯಾಣಿಕರನ್ನು ಡಿಆರ್‌ಐ ಅಧಿಕಾರಿಗಳು ಖಚಿತ ಗುಪ್ತಚರ ಮಾಹಿತಿಗಳ ಆಧಾರದ ಮೇಲೆ ಮೇಲೆ ವಶಕ್ಕೆ ಪಡೆಯಲಾಗಿದೆ ಎಂದು ಡಿಆರ್‌ಐ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
"ಚೆಕ್ - ಇನ್ ಸಾಮಗ್ರಿಗಳ ಪರೀಕ್ಷೆಯ ವೇಳೆ ಸ್ಥಳೀಯವಲ್ಲದ 18 ಪ್ರಾಣಿಗಳನ್ನು ಅಂದರೆ ನಾಲ್ಕು ಪ್ರೈಮೇಟ್‌ಗಳು ಮತ್ತು 14 ಸರೀಸೃಪಗಳನ್ನು ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಾಯದಿಂದ ವಶಕ್ಕೆ ಪಡೆಯಲಾಗಿದೆ ಎಂದು ಡಿಆರ್‌ಐ ಅಧಿಕಾರಿಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇವುಗಳಲ್ಲಿ ಹತ್ತನ್ನು CITES ನ ಅನುಬಂಧ II ರಲ್ಲಿ ಸೇರಿಸಲಾದ ಪ್ರಾಣಿಗಳಾಗಿವೆ ಎಂದು ಗುರುತಿಸಲಾಗಿದೆ. ವನ್ಯಜೀವಿ (ರಕ್ಷಣೆ) ಕಾಯಿದೆ 1972 ರಲ್ಲಿ ವ್ಯಾಖ್ಯಾನಿಸಲಾಗಿರುವಂತೆ ಕಾಡು ಪ್ರಾಣಿಗಳ ಭಾಗಗಳು ಮತ್ತು ಉತ್ಪನ್ನಗಳನ್ನು ಒಳಗೊಂಡಂತೆ ಯಾವುದೇ ಪ್ರಾಣಿಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. ಪ್ರಾಣಿಗಳ ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದ ಎಲ್ಲ ಪ್ರಯಾಣಿಕರನ್ನು ಡಿಆರ್‌ಐ ಅಧಿಕಾರಿಗಳು ಕಸ್ಟಮ್ಸ್ ಆಕ್ಟ್, 1962 ರ ನಿಬಂಧನೆಗಳ ಅಡಿ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಬಂಧಿತರಿಂದ ವನ್ಯಜೀವಿ ವಸ್ತುಗಳ ಪರವಾನಗಿ, ಆಮದು ಮಾಡಿಕೊಳ್ಳುವ ಯಾವುದೇ ದಾಖಲೆಗಳು ಅಥವಾ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಸ್ವಯಂಪ್ರೇರಿತ ಬಹಿರಂಗಪಡಿಸುವಿಕೆ ಯೋಜನೆಯಡಿ ಯಾವುದೇ ದಾಖಲಾತಿಗಳನ್ನು ಪ್ರಯಾಣಿಕರಿಂದ ವಶಪಡಿಸಿಕೊಳ್ಳಲಾಗಿಲ್ಲ ಎಂದು ಅಧಿಕಾರಿಗಳು ಇದೇ ವೇಳೆ ತಿಳಿಸಿದ್ದಾರೆ.
ಹಣಕಾಸು ವ್ಯವಹಾರದ ಸುಳಿವು ಲಭ್ಯ: ಆದಾಗ್ಯೂ, ವಾಟ್ಸ್ಆ್ಯಪ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಕಳ್ಳಸಾಗಣೆ, ಖರೀದಿ - ಮಾರಾಟ ವಹಿವಾಟುಗಳ ಮೂಲಕ ಸ್ಥಳೀಯವಲ್ಲದ ವನ್ಯಜೀವಿಗಳ ಮಾರಾಟ ಮತ್ತು ಖರೀದಿ ಬಗ್ಗೆ ಹಣಕಾಸಿನ ವಹಿವಾಟಿನ ಪುರಾವೆಗಳು ಪತ್ತೆಯಾಗಿವೆ ಎಂದು ಡಿಆರ್‌ಐ ಅಧಿಕಾರಿಗಳು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಯಾವ ಯಾವ ಪ್ರಾಣಿಗಳನ್ನು ವಶಕ್ಕೆ ಪಡೆಯಲಾಗಿದೆ: ಹಳದಿ ಮತ್ತು ಹಸಿರು ಅನಕೊಂಡ, ಹಳದಿ ತಲೆಯ ಅಮೆಜಾನ್ ಗಿಳಿ, ನೈಲ್ ಮಾನಿಟರ್, ರೆಡ್ ಫೂಟ್ ಆಮೆ, ಇಗ್ವಾನಾಸ್, ಬಾಲ್ ಹೆಬ್ಬಾವುಗಳು, ಅಲಿಗೇಟರ್ ಗಾರ್, ಯಾಕಿ ಮಂಕಿ, ಮುಸುಕು ಹಾಕಿದ ಗೋಸುಂಬೆ, ರಕೂನ್ ಡಾಗ್ ಮುಂತಾದ ಅಪರೂಪದ ಮತ್ತು ಅಪಾಯದ ಅಂಚಿನಲ್ಲಿರುವ ಪ್ರಾಣಿಗಳನ್ನು ವಶಕ್ಕೆ ಪಡೆದು ರಕ್ಷಣೆ ಮಾಡಲಾಗಿದೆ ಎಂದು ಡಿಆರ್‌ಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಮಧ್ಯೆ, ಬಿಳಿತಲೆಯ ಪಿಯೋನಸ್ ಇತ್ಯಾದಿಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹಸ್ತಾಂತರಿಸಲಾಗಿದೆ.
ವನ್ಯಜೀವಿಗಳ ಕಳ್ಳಸಾಗಣೆಯಲ್ಲಿ ತೊಡಗಿರುವ ನಾಲ್ವರನ್ನು ಇಲ್ಲಿಯವರೆಗೆ ಬಂಧಿಸಲಾಗಿದೆ ಎಂದು ಡಿಆರ್‌ಐ ಹೇಳಿಕೆ ತಿಳಿಸಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಡಿಆರ್‌ಐ ಅಧಿಕಾರಿಗಳು ಇದೇ ವೇಳೆ ತಿಳಿಸಿದ್ದಾರೆ.
ಇದನ್ನು ಓದಿ:ನಕಲಿ ಅಂಕಪಟ್ಟಿ ಜಾಲದ ವಿರುದ್ಧ ಸಿಸಿಬಿ ಸಮರ; ಆರೂವರೆ ಸಾವಿರಕ್ಕೂ ಅಧಿಕ ಅಂಕಪಟ್ಟಿಗಳು ಜಪ್ತಿ