ಮುಂಬೈ: ದೇವಸ್ಥಾನ ಎಂಬುದು ಪವಿತ್ರ ತಾಣ. ದೈವತ್ವದ ಜೊತೆಗೆ ಶಾಂತಿ ನೆಲೆಸಿರುತ್ತದೆ. ಇಂತಹ ಪುಣ್ಯಕ್ಷೇತ್ರದಲ್ಲಿ ಆಧುನಿಕತೆ ಮತ್ತು ಸಾಮಾಜಿಕ ಮಾಧ್ಯಮಗಳಿಂದಾಗಿ ಅಪಭ್ರಂಶುಗಳು ಹೆಚ್ಚುತ್ತಿದ್ದು ವಸ್ತ್ರಸಂಹಿತೆ ಜಾರಿಗೆ ತರಲು ಮಹಾರಾಷ್ಟ್ರ ಮಂದಿರಗಳ ಮಹಾಸಂಘ ಮುಂದಾಗಿದೆ. ಭಕ್ತರ ನಂಬಿಕೆ ಮತ್ತು ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡಲು ಮಂದಿರಗಳ ಮಹಾಸಂಘ ವಸ್ತ್ರಸಂಹಿತೆ ರೂಪಿಸುತ್ತಿದೆ. ಹೀಗಾಗಿ ಇನ್ನು ಮುಂದೆ ದೇವಸ್ಥಾನ ಪ್ರವೇಶಕ್ಕೂ ಮೊದಲು ನೀವು ಧರಿಸುವ ಬಟ್ಟೆ ಸಭ್ಯವಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು.
ಪ್ರಾರ್ಥನಾ ಸ್ಥಳಗಳ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಮಹಾರಾಷ್ಟ್ರ ಮಂದಿರ ಮಹಾಸಂಘ ಈ ನಿಟ್ಟಿನಲ್ಲಿ ವ್ಯಾಪಕ ಪ್ರಚಾರ ನಡೆಸುತ್ತಿದೆ. ಈಗಾಗಲೇ ರಾಜ್ಯಾದ್ಯಂತ 130ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಈ ಸಂಹಿತೆ ಜಾರಿಗೆ ಯೋಜಿಸಲಾಗಿದೆ. ದೇಗುಲಗಳ 500 ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನೂ ನಿಷೇಧಿಸಲು ಮಹಾಸಂಘ ಬಯಸಿದೆ. ಈ ಸಂಘ ದೇವಾಲಯದ ಟ್ರಸ್ಟಿಗಳು, ಆಡಳಿತಗಾರರು, ಅರ್ಚಕರು, ವಕೀಲರು ಮತ್ತು ಕಾರ್ಯಕರ್ತರನ್ನು ಒಳಗೊಂಡಿದೆ.
ನಂಬಿಕೆ, ಭಕ್ತಿ ಕದಡದಿರಲಿ: ದೇವಸ್ಥಾನಗಳಿಂದ ಭಕ್ತರನ್ನು ದೂರ ಮಾಡುವುದು ಇದರ ಉದ್ದೇಶವಲ್ಲ. ಬದಲಾಗಿ, ಪುಣ್ಯ ಕ್ಷೇತ್ರಗಳ ಪಾವಿತ್ರ್ಯತೆ ಮತ್ತು ಧರ್ಮಾಧಾರಿತ ನಂಬಿಕೆಗಳು ಕುಸಿಯದಿರಲಿ. ಭಕ್ತಿಯ ತಾಣಗಳು ಹುಚ್ಚಾಟಕ್ಕೆ ಕಾರಣವಾಗದಿರಲು ಎಂಬ ಸದುದ್ದೇಶದಿಂದ ನಿಯಮ ಜಾರಿಗೆ ತರಲಾಗುತ್ತಿದೆ ಎಂದು ಮಹಾಸಂಘ ಅಭಿಪ್ರಾಯಪಟ್ಟಿದೆ.
ಕೆಲವು ಭಕ್ತರು ಸರಿಯಾದ ವೇಷಭೂಷಣವಿಲ್ಲದೆ ದೇವಸ್ಥಾನಗಳಿಗೆ ಬಂದು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆಗಾಗಿ ವಿಡಿಯೋ ಮಾಡುತ್ತಾರೆ. ಪೂಜಾಸ್ಥಳ ಎಂದಿಗೂ ಪವಿತ್ರವೇ. ಈ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುವಾಗ ಸಭ್ಯ ಬಟ್ಟೆ ಧರಿಸುವ ಕಡೆ ಗಮನ ಹರಿಸಬೇಕು. ದೇಹದ ಅಂಗಾಂಗ ಕಾಣುವ, ಚಿಕ್ಕದಾದ ಅಥವಾ ಬಿಗಿಯಾದ ಬಟ್ಟೆ, ಹರಿದಂತಿರುವ ಬಟ್ಟೆಗಳನ್ನು ದೇವಸ್ಥಾನದ ಆವರಣದಲ್ಲಿ ನಿರ್ಬಂಧಿಸಲಾಗುತ್ತಿದೆ ಪ್ಯಾಂಟ್, ಶರ್ಟ್ಗೆ ಧರಿಸಿ ಬಂದಲ್ಲಿ ಯಾವುದೇ ಅಭ್ಯಂತರವಿಲ್ಲ ಎಂದು ಮಹಾಸಂಘದ ಸಂಯೋಜಕ ಸುನೀಲ್ ತಿಳಿಸಿದರು.
ವರ್ಷಾಂತ್ಯದೊಳಗೆ ಸಾಧ್ಯವಾದಷ್ಟು ದೇವಸ್ಥಾನಗಳಲ್ಲಿ ಈ ನಿಯಮ ಜಾರಿಗೆ ತರಲಾಗುವುದು. ಸಂಪ್ರದಾಯ ಮತ್ತು ನಂಬಿಕೆಯ ಪ್ರಕಾರ ಪ್ರಾಣಿ ಬಲಿಯನ್ನು ಹೊರತುಪಡಿಸಿ, ದೇವಾಲಯದ 500 ಮೀಟರ್ ವ್ಯಾಪ್ತಿಯಲ್ಲಿ ಮಾಂಸ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಜೈನ ಮಂದಿರಗಳಲ್ಲೂ ಡ್ರೆಸ್ಕೋಡ್: ಉತ್ತರ ಪ್ರದೇಶದ ಪ್ರಯಾಗರಾಜ್‌ನ ದಿಗಂಬರ ಜೈನ ದೇವಾಲಯಗಳು ಸಹ ವಸ್ತ್ರಸಂಹಿತೆ ನಿಯಮವನ್ನು ಅಳವಡಿಸಿಕೊಂಡಿವೆ. ಜೀನ್ಸ್, ಹಾಫ್ ಪ್ಯಾಂಟ್, ಫ್ರಾಕ್‌ಗಳು ಮತ್ತು ಸಭ್ಯವಲ್ಲ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಿದೆ. ಮಹಿಳೆಯರು ಮತ್ತು ಹುಡುಗಿಯರು ತಮ್ಮ ತಲೆಯನ್ನು ಮುಚ್ಚಿಕೊಂಡು ದೇವಾಲಯಕ್ಕೆ ಪ್ರವೇಶಿಸಲು ವಿನಂತಿಸಲಾಗಿದೆ. ಸಾಧಾರಣ ಮತ್ತು ಸಭ್ಯ ಬಟ್ಟೆಗಳನ್ನು ಧರಿಸಿ ಬರುವವರಿಗೆ ಮಾತ್ರ ಪ್ರವೇಶವನ್ನು ಅನುಮತಿಸಲಾಗುವುದು ಎಂದು ಜೈನ ದೇವಾಲಯಗಳ ಮಂಡಳಿ ಹೇಳಿದೆ.
ಈ ಕುರಿತಾಗಿ ದೇವಸ್ಥಾನಗಳಲ್ಲಿ ಸೂಚನಾ ಫಲಕಗಳನ್ನೂ ಅಳವಡಿಸಲಾಗಿದೆ. ಇನ್ನು ಮುಂದೆ ಸಭ್ಯ ಬಟ್ಟೆಯಲ್ಲಿ ಮಾತ್ರ ದೇವಾಲಯಗಳನ್ನು ಪ್ರವೇಶಿಸಬೇಕು. ಧಾರ್ಮಿಕ ಸ್ಥಳಗಳ ಮಹತ್ವವವನ್ನು ಗಮನದಲ್ಲಿಟ್ಟುಕೊಂಡು ಡ್ರೆಸ್ ಕೋಡ್ ಅನ್ನು ಜಾರಿಗೊಳಿಸಲಾಗಿದೆ. ಸುಸಂಸ್ಕೃತ, ಸುಶಿಕ್ಷಿತ ಮಾದರಿಯನ್ನು ಸಮಾಜವನ್ನು ಸ್ಥಾಪಿಸಲು ಪ್ರಯತ್ನಿಸೋಣ ಎಂದು ದಿಗಂಬರ ಜೈನ ಸಮಾಜದ ಕಾರ್ಯದರ್ಶಿ ರಾಜೇಶ್ ಜೈನ್ ಹೇಳಿದ್ದಾರೆ.