ಲಖನೌ(ಉತ್ತರ ಪ್ರದೇಶ): ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥ ಮಾಯಾವತಿ ದೇಶದ ರಾಷ್ಟ್ರಪತಿ ಆಗುವ ಕನಸು ಕಾಣುತ್ತಿದ್ದಾರೆಂದು ಹೇಳಿಕೆ ನೀಡಿದ್ದ ಅಖಿಲೇಶ್ ಯಾದವ್ಗೆ ಇದೀಗ ಮಾಯಾವತಿ ತಿರುಗೇಟು ನೀಡಿದ್ದಾರೆ. ನಾನು ರಾಷ್ಟ್ರಪತಿ ಅಲ್ಲ, ಬದಲಾಗಿ ರಾಜ್ಯದ ಮುಖ್ಯಮಂತ್ರಿ ಅಥವಾ ಪ್ರಧಾನಿ ಆಗುವ ಕನಸು ಕಾಣುತ್ತಿದ್ದೇನೆಂದು ಟಕ್ಕರ್ ನೀಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜವಾದಿ ಪಕ್ಷ ತನ್ನ ಮತಗಳನ್ನು ಬಿಜೆಪಿಗೆ ವರ್ಗಾವಣೆ ಮಾಡಿದೆ ಎಂದು ಅಖಿಲೇಶ್ ಯಾದವ್ ಆರೋಪ ಮಾಡಿದ್ದು, ಇದಕ್ಕೆ ಪ್ರತಿಯಾಗಿ ಬಿಜೆಪಿ ಅವರನ್ನ ದೇಶದ ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡುತ್ತದೆಯೇ ಎಂಬುದನ್ನು ಕಾಯ್ದು ನೋಡಬೇಕು ಎಂದಿದ್ದರು. ಇದರ ಜೊತೆಗೆ, ಬಿಎಸ್ಪಿ ಜನರಲ್ ಸೆಕ್ರೆಟರಿ ಎಸ್ಸಿ ಮಿಶ್ರಾ ಹಾಗೂ ಪಕ್ಷದ ಶಾಸಕ ಉಮಾ ಶಂಕರ್ ಸಿಂಗ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಬೆನ್ನಲ್ಲೇ ಮಾಯಾವತಿ ಸುದ್ದಿಗೋಷ್ಠಿ ನಡೆಸಿ, ಸ್ಪಷ್ಟನೆ ನೀಡಿದ್ದಾರೆ.
ನಾನು ರಾಷ್ಟ್ರಪತಿಯಾಗಬೇಕೆಂದು ಯಾವತ್ತೂ ಕನಸು ಕಂಡಿಲ್ಲ. ನನಗೆ ರಾಜಕಾರಣದ ಬಗ್ಗೆ ಚೆನ್ನಾಗಿ ಗೊತ್ತಿದೆ. ನನಗೆ ಆರಾಮದಾಯಕ ಜೀವನ ಬೇಡ. ಹೋರಾಟದ ಹಾದಿ ಬಯಸಿದ್ದೇನೆ. ಸಮಾಜವಾದಿ ಪಕ್ಷ ನನ್ನನ್ನು ರಾಷ್ಟ್ರಪತಿಯನ್ನಾಗಿ ಮಾಡುವ ಮೂಲಕ ಉತ್ತರ ಪ್ರದೇಶದಲ್ಲಿ ತನ್ನ ಅಧಿಕಾರದ ಹಾದಿ ಸುಗಮಗೊಳಿಸಿಕೊಳ್ಳಬೇಕು ಎನ್ನುವ ಕನಸು ಮರೆತುಬಿಡಬೇಕು ಎಂದಿದ್ದಾರೆ.
ಇದನ್ನೂ ಓದಿ: ದೇವಸ್ಥಾನಕ್ಕೆ 101 ಕೆಜಿ ಬೆಳ್ಳಿ ಬಾಗಿಲು ಅರ್ಪಿಸಿದ ಭಕ್ತ!
ನಮ್ಮ ಅಧಿಕಾರ ಅವಧಿಯಲ್ಲಿ ನಿರ್ಮಾಣಗೊಂಡಿರುವ ಸ್ಮಾರಕಗಳನ್ನು ಸಮಾಜವಾದಿ ಪಕ್ಷ ಹಾಗೂ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ಮಾಡಿದ್ದು, ಅದರ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲು ನಮ್ಮ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಯಾವುದೇ ಪಕ್ಷದಿಂದಲೂ ನನಗೆ ರಾಷ್ಟ್ರಪತಿ ಆಫರ್ ಬಂದರೆ ಅದನ್ನು ಸ್ವೀಕಾರ ಮಾಡುವುದಿಲ್ಲ ಎಂದು ಬಿಎಸ್ಪಿ ವರಿಷ್ಠೆ ಮಾಯಾವತಿ ತಿಳಿಸಿದ್ದಾರೆ.