ಲಖಿಂಪುರ(ಅಸ್ಸೋಂ): ನ್ಯಾಯಾಲಯಕ್ಕೆ ಕರೆತಂದ ವೇಳೆ ಭದ್ರತಾ ಲೋಪದ ಲಾಭ ಪಡೆದುಕೊಂಡು ಪರಾರಿಯಾಗಿದ್ದ ಆರೋಪಿಯೋರ್ವನನ್ನು ಸಾರ್ವಜನಿಕರು ಹತ್ಯೆಗೈದಿರುವ ಘಟನೆ ಅಸ್ಸೋಂನಲ್ಲಿ ನಡೆದಿದೆ. ಆರೋಪಿ ರಾಜು ಬರುವಾ ಎಂಬಾತನನ್ನು ಇಂದು ಬೆಳಗ್ಗೆ ಸಾರ್ವಜನಿಕರು ಹಲ್ಲೆ ನಡೆಸಿ, ಕೊಂದು ಹಾಕಿದ್ದಾರೆ.
ಆಗಸ್ಟ್ 16ರಂದು ಮೂವರು ಆರೋಪಿಗಳಾದ ಸೋಂತಿ ದಾಸ್, ಜತಿನ್ ತಾಮುಲಿ ಹಾಗೂ ರಾಜು ಬರುವಾ ಎಂಬಾತರನ್ನು ಢಕುಖಾನಾ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ನ್ಯಾಯಾಲಯದಲ್ಲಿನ ಭದ್ರತಾ ಲೋಪದ ಲಾಭ ಪಡೆದು, ಮೂವರು ಅಪರಾಧಿಗಳು ಶೌಚಾಲಯದ ಕಿಟಕಿ ಒಡೆದು ಪರಾರಿಯಾಗಿದ್ದರು. ಇಂದು ಬೆಳಗ್ಗೆ ರಾಜು ಬರುವಾ ಸಾರ್ವಜನಿಕರ ಕೈಗೆ ಸಿಕ್ಕಿದ್ದು, ಆತನನ್ನು ಹೊಡೆದು ಕೊಂದಿದ್ದಾರೆ.
ಮೂವರು ಆರೋಪಿಗಳು ಅಸ್ಸೋಂನಲ್ಲಿ ನಡೆದ ವಿವಿಧ ಕೊಲೆ, ದರೋಡೆ ಮತ್ತು ಅತ್ಯಾಚಾರದಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಇವರನ್ನು ಸೆಪ್ಟೆಂಬರ್ 2021ರಲ್ಲಿ ಬಂಧನ ಮಾಡಲಾಗಿತ್ತು. ಅನಾರೋಗ್ಯದ ಕಾರಣದಿಂದ ಜನವರಿ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ತಪ್ಪಿಸಿಕೊಂಡಿದ್ದರು. ಇದಾದ ಬಳಿಕ ಮತ್ತೊಮ್ಮೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.
ಇದನ್ನೂ ಓದಿ: ಜೈಲಿನಲ್ಲೇ ವ್ಯಕ್ತಿ ಹತ್ಯೆ: 15 ಕೈದಿಗಳಿಗೆ ಮರಣದಂಡನೆ,10 ಕೈದಿಗಳಿಗೆ ಜೀವಾವಧಿ ಶಿಕ್ಷೆ
ಇವರ ಮೇಲಿನ ಪ್ರಕರಣಗಳ ವಿಚಾರಣೆ ನಡೆಸುವ ಉದ್ದೇಶದಿಂದ ಆಗಸ್ಟ್ 16ರಂದು ಕೋರ್ಟ್ಗೆ ಕರೆತರಲಾಗಿತ್ತು. ಈ ವೇಳೆ ಮೂವರು ಅಪರಾಧಿಗಳು ಪರಾರಿಯಾಗಿದ್ದರು. ಆದರೆ, ಜತಿನ್, ತಮುಲಿ ಇಂದು ಬೆಳಗ್ಗೆ ಪೊಲೀಸರ ಮುಂದೆ ಶರಣಾಗಿದ್ದರು. ಆದರೆ, ತಪ್ಪಿಸಿಕೊಂಡು ಸೇತುವೆ ಕೆಳಗೆ ಅಡಗಿ ಕುಳಿತಿದ್ದ ರಾಜು ಎಂಬಾತನನ್ನು ಸ್ಥಳೀಯರು ಹೊಡೆದು ಕೊಂದಿದ್ದಾರೆ. ಇದಾದ ಬಳಿಕ ಮೃತದೇಹ ತೆಗೆದುಕೊಂಡು ಹೋಗಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಯಾವುದೇ ವ್ಯಕ್ತಿಯ ಬಂಧನ ಮಾಡಿಲ್ಲ.