ಭುವನೇಶ್ವರ್, ಒಡಿಶಾ: ಡಿಆರ್ಡಿಓದ ಬೇಹುಗಾರಿಕಾ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಪ್ರಕರಣದಲ್ಲಿ ಸುಮಾರು ಐದು ಮಂದಿ ಆರೋಪಿಗಳಿದ್ದು, ಈ ಐದೂ ಮಂದಿ ಆರೋಪಿಗಳೊಂದಿಗೆ 'ನಿಗೂಢ ಮಹಿಳೆ' ಸಂಪರ್ಕ ಹೊಂದಿದ್ದಳು ಎಂದು, ಜೊತೆಗೆ ಆ ಆರೋಪಿಗಳಲ್ಲಿ ಇಬ್ಬರಿಗೆ ವಿವಾಹವಾಗುವ ಪ್ರಸ್ತಾವವನ್ನು ಇಟ್ಟಿದ್ದಳು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಒಡಿಶಾದ ಬಾಲಾಸೋರ್ನಲ್ಲಿರುವ ಇಂಟಿಗ್ರೇಟೆಡ್ ಟೆಸ್ಟಿಂಗ್ ರೇಜ್ (ITR-Integrated Test Range)ನಲ್ಲಿ ಕೆಲಸ ಮಾಡುತ್ತಿದ್ದ ಐದು ಮಂದಿಯ ಮೇಲೆ ಬೇಹುಗಾರಿಕೆ ನಡೆಸಿದ ಆರೋಪ ಕೇಳಿಬಂದಿತ್ತು. ಈ ಪ್ರಕರಣದ ವಿಚಾರಣೆಯನ್ನು ಒಡಿಶಾ ಪೊಲೀಸ್ನ ಕ್ರೈಮ್ ಬ್ರಾಂಚ್ ನಡೆಸುತ್ತಿದ್ದು, ಕೆಲವೊಂದು ಮಾಹಿತಿಯನ್ನು ಬಹಿರಂಗಪಡಿಸಿದೆ.
ಎಲ್ಲರಿಗೂ ಪರಿಚಯ, ಆದರೆ..
ಈ ಪ್ರಕರಣದ ವಿಚಾರಣೆ ನಡೆಸಿರುವ ಅಪರಾಧ ವಿಭಾಗದ ಎಡಿಜಿಪಿ ಸಂಜೀಬ್ ಪಾಂಡ ಓರ್ವ ಮಹಿಳೆ ತಾನು ಬಾಲಾಸೋರ್ ಮೂಲದವಳು ಎಂದು ಸುಳ್ಳು ಹೇಳಿಕೊಂಡು ಐದೂ ಮಂದಿಯೊಂದಿಗೆ ಮಾತನಾಡಿದ್ದಾಳೆ. ಐವರೂ ಆರೋಪಿಗಳಿಗೆ ಬೇರೊಬ್ಬ ಆರೋಪಿಯೊಂದಿಗೆ ಆಕೆ ಪರಿಚಯದಲ್ಲಿರುವ ವಿಚಾರ ಗೊತ್ತಿಲ್ಲ. ಆಕೆ ಬ್ರಿಟನ್ ಮೂಲದ ಸಿಮ್ಕಾರ್ಡ್ ಬಳಸಿದ್ದು, ವಿವಿಧ ಹೆಸರುಗಳೊಂದಿಗೆ ಏಳು ಫೇಸ್ಬುಕ್ ಖಾತೆಗಳನ್ನು ಹೊಂದಿದ್ದಳು ಎಂದು ಮಾಹಿತಿ ನೀಡಿದ್ದಾರೆ.
ಹನಿಟ್ರ್ಯಾಪ್ ಆಯಾಮ..
ಆರೋಪಿಗಳಲ್ಲಿ ಇಬ್ಬರಿಗೆ ಆಗಾಗ ವಿಡಿಯೋ ಕಾಲ್ ಮಾಡುತ್ತಿದ್ದ ಆಕೆ, ಅವರ ಮುಂದೆ ಮದುವೆಯಾಗುವ ಪ್ರಸ್ತಾಪವನ್ನೂ ಇರಿಸಿದ್ದಳು. ಆ ಮಹಿಳೆಯ ಗುರುತು ಪತ್ತೆ ಹಚ್ಚಬೇಕಿದೆ. ಆರೋಪಿಗಳಲ್ಲಿ ಓರ್ವನಿಗೆ ಚಾಂಡಿಪುರದ ತನ್ನ ಮನೆಗೆ ಬರುವಂತೆ ಆಹ್ವಾನ ಕೂಡಾ ನೀಡಿದ್ದಳು. ಮೇಲ್ನೋಟಕ್ಕೆ ಇದು ಹನಿಟ್ರ್ಯಾಪ್ ಇದ್ದಂತೆ ಕಾಣುತ್ತದೆ ಎಂದು ಎಡಿಜಿಪಿ ಹೇಳಿದ್ದಾರೆ.
ಬ್ರಿಟನ್ ಫೋನ್ ನಂಬರ್, ದುಬೈ ಬ್ಯಾಂಕ್ ಅಕೌಂಟ್!
ಆ ನಿಗೂಢ ಮಹಿಳೆಯ ಫೋನ್ ನಂಬರ್ ಅನ್ನು ಪರಿಶೀಲನೆ ನಡೆಸಿದಾಗ ಅದು ಇಂಗ್ಲೆಂಡ್ನದು ಎಂದು ಗೊತ್ತಾಗಿದೆ. ಆದರೆ ಆಕೆಯ ಬ್ಯಾಂಕ್ ಖಾತೆ ದುಬೈನಲ್ಲಿರುವುದು ಗೊತ್ತಾಗಿದ್ದು, ಆ ಖಾತೆಯಿಂದಲೇ ಆರೋಪಿಯೊಬ್ಬನ ಖಾತೆಗೆ 2 ಕಂತಿನಲ್ಲಿ ಸುಮಾರು 38 ಸಾವಿರ ರೂಪಾಯಿ ವರ್ಗಾವಣೆಗೊಂಡಿದೆ.
ಬೇರೆ ಬೇರೆ ಖಾತೆಗಳಿಂದ ಆರೋಪಿಗಳಿಗೆ ಹಣ ಸಂದಾಯವಾಗಿರುವ ಸಾಧ್ಯತೆ ಇದೆ. ಇದನ್ನು ನಾವು ತನಿಖೆ ಮಾಡುತ್ತಿದ್ದೇವೆ. ಆ ನಿಗೂಢ ಮಹಿಳೆಯ ಗುರುತು ಪತ್ತೆಯಾದ ನಂತರ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಎಡಿಜಿಪಿ ಹೇಳಿದ್ದಾರೆ.
ಏಳು ದಿನಗಳ ಕಾಲ ಐವರೂ ಆರೋಪಿಗಳಿಗೆ ವಿಧಿಸಲಾಗಿದ್ದ ಪೊಲೀಸ್ ಕಸ್ಟಡಿ ಶನಿವಾರ ಅಂತ್ಯವಾಗಿದ್ದು, ಈಗ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗುತ್ತದೆ. ಹಣಕ್ಕಾಗಿ ಪಾಕಿಸ್ತಾನಕ್ಕೆ ಡಿಆರ್ಡಿಓದ ಪ್ರಮುಖ ರಹಸ್ಯ ಮಾಹಿತಿಯನ್ನು ರವಾನಿಸುತ್ತಿದ್ದ ಆರೋಪದಲ್ಲಿ ಸೆಪ್ಟೆಂಬರ್ 14 ಮತ್ತು 16ರಂದು ಆರೋಪಿಗಳನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ವೈಭವ ಮರಳಿ ತರುವತ್ತ ಮೋದಿ: ಅಮೆರಿಕದಿಂದ 157 ಪುರಾತನ ಕಲಾಕೃತಿಗಳು ವಾಪಸ್