ನವದೆಹಲಿ : ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಆಧಾರ್‌ನೊಂದಿಗೆ ಸೀಡ್ ಮಾಡಿದ ತಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಗಳನ್ನು ಪರಿಶೀಲಿಸಲು ಅವಕಾಶ ಮಾಡಿಕೊಡಲಾಗಿದೆ. ಬಳಕೆದಾರರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಇಂಥದೊಂದು ಕ್ರಮಕ್ಕೆ ಮುಂದಾಗಿದೆ. ತಮ್ಮ ಆಧಾರ್ ಕಾರ್ಡ್ನೊಂದಿಗೆ ಮೊಬೈಲ್ ನಂಬರ್ ಲಿಂಕ್ ಆಗಿದೆಯಾ ಅಥವಾ ಇಲ್ಲವಾ, ಆಗಿದ್ದರೆ ಯಾವ ನಂಬರ್ ಲಿಂಕ್ ಆಗಿದೆ ಎಂಬ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಇದರಿಂದಾಗಿ ಆಧಾರ್ ಒಟಿಪಿ ಯಾವ ನಂಬರಿಗೆ ಹೋಗುತ್ತಿದೆ ಎಂಬುದು ತಿಳಿಯುತ್ತಿರಲಿಲ್ಲ. ಈ ಗೊಂದಲವನ್ನು ನಿವಾರಿಸಲು ಯುಐಡಿಎಐ ಮುಂದಾಗಿದೆ.
ಈಗ ಹೊಸ ಸೌಲಭ್ಯದ ಮೂಲಕ ಜನರು ತಮ್ಮ ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಯಾವುದು ಎಂಬುದನ್ನು ತ್ವರಿತವಾಗಿ ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ. ಆಧಾರ್ನ ಅಧಿಕೃತ ವೆಬ್ಸೈಟ್ನಲ್ಲಿನ Verify email/mobile Number ಆಪ್ಷನ್ ಮೂಲಕ ಅಥವಾ mAadhaar ಮೂಲಕ ಇದನ್ನು ಮಾಡಬಹುದು. ಯುಐಡಿಎಐ ಅಧಿಕೃತ ವೆಬ್ಸೈಟ್ ಹೀಗಿದೆ: https://myaadhaar. uidai. gov. in/
ತಮ್ಮ ಆಧಾರ್ಗೆ ತಮ್ಮದೇ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ. ಒಂದು ವೇಳೆ ಯಾವುದೇ ಮೊಬೈಲ್ ನಂಬರ್ ಲಿಂಕ್ ಆಗಿಲ್ಲದಿದ್ದರೆ ಗ್ರಾಹಕರು ತಮಗೆ ಬೇಕಾದರೆ ಮೊಬೈಲ್ ನಂಬರ್ ಲಿಂಕ್ ಮಾಡಬಹುದು. ಹಾಗೆಯೇ ಮೊಬೈಲ್ ನಂಬರ್ ಲಿಂಕ್ ಆಗಿದ್ದು, ಅದು ಈಗಾಗಲೇ ವೆರಿಫೈ ಆಗಿದ್ದರೆ, ನಿಮ್ಮ ಮೊಬೈಲ್ ಸಂಖ್ಯೆಯನ್ನು ಈಗಾಗಲೇ ನಮ್ಮ ದಾಖಲೆಗಳೊಂದಿಗೆ ವೆರಿಫೈ ಮಾಡಲಾಗಿದೆ ಎಂಬ ಮೆಸೇಜ್ ಕಾಣಿಸಿಕೊಳ್ಳುತ್ತದೆ.
ಒಂದೊಮ್ಮೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ನೆನಪಿಲ್ಲದಿದ್ದರೆ, ಅವಳು ಅಥವಾ ಅವನು ದಾಖಲಾತಿ ಸಮಯದಲ್ಲಿ ನೀಡಿದ ಮೊಬೈಲ್ ಸಂಖ್ಯೆಯನ್ನು ಮೈ ಆಧಾರ್ ಪೋರ್ಟಲ್ ಅಥವಾ mAadhaar ಅಪ್ಲಿಕೇಶನ್‌ನಲ್ಲಿ, ಮೊಬೈಲ್‌ನ ಕೊನೆಯ ಮೂರು ಅಂಕೆಗಳನ್ನು ಪರಿಶೀಲಿಸಬಹುದು. ಇಮೇಲ್ ಅಥವಾ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಬಯಸಿದರೆ ಅಥವಾ ಇಮೇಲ್ ಅಥವಾ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಬಯಸಿದರೆ ಅವರು ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬಹುದು.
ಆಧಾರ್ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ವಿಶಿಷ್ಟ ಗುರುತನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ವ್ಯಕ್ತಿಗಳಿಗೆ ಭಾರತ ಸರ್ಕಾರದ ಪರವಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡಿದ ವೈಯಕ್ತಿಕ ಗುರುತಿನ ಸಂಖ್ಯೆಯಾಗಿದೆ. ಆಧಾರ್ ಸಂಖ್ಯೆಯು ಭಾರತದಲ್ಲಿ ಎಲ್ಲಿಯಾದರೂ ಗುರುತು ಮತ್ತು ವಿಳಾಸದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.
ಬಯೋಮೆಟ್ರಿಕ್ (ಫೋಟೋಗ್ರಾಫ್, ಐರಿಸ್-ಸ್ಕ್ಯಾನ್, ಫಿಂಗರ್‌ಪ್ರಿಂಟ್‌ಗಳು) ಮತ್ತು ನಿವಾಸಿಗಳ ಜನಸಂಖ್ಯಾ ದತ್ತಾಂಶವನ್ನು (ನಿವಾಸ ವಿಳಾಸದ ಮಾಹಿತಿ) ಸಂಗ್ರಹಿಸುವುದು, ಅವುಗಳನ್ನು ಕೇಂದ್ರೀಕೃತ ಡೇಟಾಬೇಸ್‌ನಲ್ಲಿ ಸಂಗ್ರಹಿಸುವುದು ಮತ್ತು ಪ್ರತಿ ನಿವಾಸಿಗೆ ಆಧಾರ್ ಎಂಬ 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡುವುದು ಯೋಜನೆಯ ಉದ್ದೇಶವಾಗಿದೆ. ಯಾವುದೇ ವಯಸ್ಸಿನ ವ್ಯಕ್ತಿಗಳಿಗೆ (ಮಕ್ಕಳನ್ನೂ ಒಳಗೊಂಡಂತೆ) ಗುರುತನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಆಧಾರ್ ನೀಡಲಾಗುತ್ತದೆ. ಆಧಾರ್ ಪ್ರತಿ ವ್ಯಕ್ತಿಗೆ ನೀಡಲಾಗುವುದರಿಂದ ಇದನ್ನು ಕುಟುಂಬದ ಪ್ರತಿಯೊಬ್ಬ ಸದಸ್ಯರು ಪ್ರತ್ಯೇಕವಾಗಿ ಪಡೆಯಬೇಕಾಗುತ್ತದೆ.
ಇದನ್ನೂ ಓದಿ : ಆಂಡ್ರಾಯ್ಡ್ ಪ್ರಕರಣ: ಸಿಸಿಐ ವಿಧಿಸಿದ್ದ 1338 ಕೋಟಿ ರೂ. ದಂಡ ಪಾವತಿಸಿದ ಗೂಗಲ್