ಲಖನೌ (ಉತ್ತರ ಪ್ರದೇಶ): ಉತ್ತರಾಖಂಡದ ಮಾಜಿ ರಾಜ್ಯಪಾಲೆ ಹಾಗೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷೆ ಬೇಬಿ ರಾಣಿ ಮೌರ್ಯ ಅವರು ಸಂಜೆ 5 ಗಂಟೆಯ ನಂತರ ಪೊಲೀಸ್ ಠಾಣೆಗಳಿಗೆ ಮಹಿಳೆಯರು ಹೋಗಬಾರದು ಎಂದು ಸಲಹೆ ನೀಡಿದ್ದಾರೆ. ಬೇಬಿ ರಾಣಿ ಮೌರ್ಯ ಅವರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.
‘ಐದು ಗಂಟೆಯ ಬಳಿಕ ಮಹಿಳೆಯರು ಠಾಣೆಗೆ ಹೋಗಬಾರದು’
ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಾಣಸಿ ಕ್ಷೇತ್ರದಲ್ಲಿ ಸಂತ ರವಿದಾಸ್ ಮಂಡಲದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮೌರ್ಯ ಪಾಲ್ಗೊಂಡು ಮಾತನಾಡಿದ್ದರು. ‘ಪೊಲೀಸ್ ಠಾಣೆಯಲ್ಲಿ ಮಹಿಳಾ ಅಧಿಕಾರಿಗಳು ಇದ್ದರೂ, ಮಹಿಳೆಯರು ಮುಸ್ಸಂಜೆ ಅಥವಾ ಐದು ಗಂಟೆಯ ನಂತರ ಪೊಲೀಸ್ ಠಾಣೆಗೆ ಹೋಗಬಾರದು. ಅಗತ್ಯವಿದ್ದರೆ, ತಂದೆ-ಸಹೋದರ, ಪತಿ ಜತೆ ಮಾತ್ರ ಅಲ್ಲಿಗೆ ಹೋಗಬೇಕು ಎಂದಿದ್ದರು.
‘ಈ ಹೇಳಿಕೆ ಬಿಜೆಪಿ-ಆರ್ಎಸ್ಎಸ್ ಮನಸ್ಥಿತಿ ಬಿಂಬಿಸುತ್ತದೆ’
ಬೇಬಿ ರಾಣಿ ಮೌರ್ಯ ಅವರ ಈ ಹೇಳಿಕೆಯು ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಬಗ್ಗುಬಡಿಯಲು ವಿಪಕ್ಷಗಳಿಗೆ ಆಹಾರವಾಯಿತು. ಕಾಂಗ್ರೆಸ್ನ ರಾಜ್ಯ ವಕ್ತಾರ ಅಂಶು ಅವಸ್ಥಿ ಮಾತನಾಡಿ, ಬೇಬಿಯವರ ಈ ಹೇಳಿಕೆ ಬಿಜೆಪಿ ಮತ್ತು ಆರ್ಎಸ್ಎಸ್ನ ಮನಸ್ಥಿತಿಯನ್ನು ಬಿಂಬಿಸುತ್ತದೆ. ಮಹಿಳೆಯರು ಐದು ಗಂಟೆಯ ನಂತರ ಯಾಕೆ ಠಾಣೆಗಳಿಗೆ ಹೋಗಬಾರದು? ರಾಜ್ಯದಲ್ಲಿ ಜಂಗಲ್ ರಾಜ್ ಸರ್ಕಾರ ಚಾಲ್ತಿಯಲ್ಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
‘ ಮಹಿಳೆಯರ ಧ್ವನಿಯಾಗಿ ಪ್ರಿಯಾಂಕಾ ಮುಂಚೂಣಿ’
ಅಲ್ಲದೇ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್, ಮಹಿಳೆಯರಿಗೆ ಶೇ.40 ರಷ್ಟು ಟಿಕೆಟ್ಗಳನ್ನು ನೀಡಲು ನಿರ್ಧರಿಸಿದೆ. ಈ ಮಧ್ಯೆ, ಮಹಿಳೆಯರು ದುರ್ಬಲರು ಎಂದು ಪ್ರತಿಬಿಂಬಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಕಿಡಿಕಾರಿದರು. ಯುಪಿಯಲ್ಲಿ ಮಹಿಳಾ ಶಕ್ತಿ ದುರ್ಬಲವಾಗಿಲ್ಲ, ಬೇಬಿ ರಾಣಿಯವರ ದೃಷ್ಟಿಕೋನದಲ್ಲಿ ಮಹಿಳೆಯರು ದುರ್ಬಲರಾಗಿದ್ದಾರೆ. ಆದರೆ, ರಾಜ್ಯದಲ್ಲಿ ಕಲ್ಪನಾ ಚಾವ್ಲಾ, ರಾಣಿ ಲಕ್ಷ್ಮಿಬಾಯಿಯಂಥವರಿದ್ದಾರೆ. ಅವರೆಲ್ಲರ ಧ್ವನಿಯಾಗಿ ಪ್ರಿಯಾಂಕಾ ಗಾಂಧಿ ಮುಂಚೂಣಿಯಲ್ಲಿದ್ದಾರೆ ಎಂದರು.
‘ಬೇಟಿ ಬಚಾವೋ’
ಆಮ್ ಆದ್ಮಿ ಪಕ್ಷದ ಉತ್ತರ ಪ್ರದೇಶ ಉಸ್ತುವಾರಿ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ಈ ವಿಷಯಕ್ಕೆ ಸಂಬಂಧಿಸಿದ ಸುದ್ದಿ ಲಗತ್ತಿಸುತ್ತಾ, "ಬೇಟಿ ಬಚಾವೋ" (ಹೆಣ್ಣು ಮಗುವನ್ನು ಉಳಿಸಿ) ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ."ಸಮಾಜವಾದಿ ಪಕ್ಷದ ಇತರೆ ನಾಯಕರೂ ಈ ಹೇಳಿಕೆಯನ್ನು ಖಂಡಿಸಿದ್ದಾರೆ.
‘ಯಾರು, ಯಾವಾಗ ಬೇಕಾದ್ರೂ ಠಾಣೆಗೆ ಹೋಗಬಹುದು’
ಪರಿಸ್ಥಿತಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಭಾರತೀಯ ಜನತಾ ಪಕ್ಷದ ರಾಜ್ಯ ವಕ್ತಾರ ಸಂಜಯ್ ಚೌಧರಿ, ಪಕ್ಷವು ನಾಗರಿಕರಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ. ಯಾರು ಬೇಕಾದರೂ ಯಾವುದೇ ಸಮಯದಲ್ಲಿ ಪೊಲೀಸ್ ಠಾಣೆಗೆ ಹೋಗಬಹುದು ಎಂದಿದ್ದಾರೆ.
‘ನನ್ನ ಹೇಳಿಕೆ ತಿರುಚಲಾಗಿದೆ’
ಈ ಬಗ್ಗೆ ಮಾತನಾಡಿರುವ ಬೇಬಿ ರಾಣಿ ಮೌರ್ಯ, ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ನಾನು ಬನಾರಸ್‌ನ ದಲಿತ ಬಡಾವಣೆಯಲ್ಲಿದ್ದೆ. ಆ ಕಾರ್ಯಕ್ರಮದಲ್ಲಿ ದಲಿತ ಸಹೋದರಿಯರು ಹಾಗೂ ಮುಸ್ಲಿಂ ಸಹೋದರಿಯರು ಇದ್ದರು. ನಾನು ಅವರಿಗೆ ಮುಖ್ಯಮಂತ್ರಿಯ ಬಗ್ಗೆ ಮಾಹಿತಿ ನೀಡುತ್ತಿದ್ದೆ. ಯೋಗಿ, ಮೋದಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದೆ. ಮಹಿಳೆಯರಿಗೆ ತ್ವರಿತ ನ್ಯಾಯ ಸಿಗುವ ‘ನ್ಯಾಯಾಲಯಗಳ ವ್ಯವಸ್ಥೆಯೂ ಇದೆ ಎಂದು ನಾನು ಅವರಿಗೆ ಹೇಳಿದ್ದೇನೆ. ಯೋಗಿ ಸರ್ಕಾರ ಮತ್ತು ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಮಹಿಳೆಯರ ಸುರಕ್ಷತೆ ಮತ್ತು ಸ್ವಾವಲಂಬನೆಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಪ್ರತಿಪಕ್ಷಗಳು ನನ್ನ ಹೇಳಿಕೆಯನ್ನು ತಿರುಚಿವೆ ಎಂದರು.
ಅಸಂಬದ್ಧ ಹೇಳಿಕೆ ನೀಡಿದ್ದ ಉಪೇಂದ್ರ ತಿವಾರಿ
ಯೋಗಿ ಸರ್ಕಾರದ ಸ್ವತಂತ್ರ ಉಸ್ತುವಾರಿ, ಕ್ರೀಡೆ, ಯುವ ಕಲ್ಯಾಣ ಮತ್ತು ಪಂಚಾಯತ್ ರಾಜ್ ಸಚಿವ ಉಪೇಂದ್ರ ತಿವಾರಿ ಅವರು ಇತ್ತೀಚೆಗೆ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಸಂವಾದದಲ್ಲಿ ಅಸಂಬದ್ಧ ಹೇಳಿಕೆಯನ್ನು ನೀಡಿದ್ದು ಉಲ್ಲೇಖನೀಯ. 95ರಷ್ಟು ಜನರು ಡೀಸೆಲ್ ಮತ್ತು ಪೆಟ್ರೋಲ್ ಬಳಸುವುದಿಲ್ಲ ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ಕೋವಿಡ್ ಲಸಿಕಾ ತಯಾರಕರ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ!
ಈ ಬೆಳವಣಿಗೆಗಳು 2022 ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಸಂಭವಿಸಿವೆ.