ನವದೆಹಲಿ: ಪಡಿತರ ಧಾನ್ಯಗಳನ್ನು ಪಡೆಯಲು ಬಡ ವಲಸಿಗರಿಗೆ ಅಡೆತಡೆಗಳನ್ನು ಸೃಷ್ಟಿಸಬಾರದು ಮತ್ತು 'ಒನ್ ನೇಷನ್ ಒನ್ ರೇಷನ್ ಕಾರ್ಡ್ (ಒನೋರ್ಕ್)' ಯೋಜನೆಯನ್ನು ಜಾರಿಗೆ ತರಬೇಕು ಎಂದು ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ದೆಹಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಇ - ಪೋಸ್ (ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್) ಸಾಧನಗಳನ್ನು ಹೊಂದಿಸುವುದು ಒಎನ್‌ಒಆರ್‌ಸಿ ಅನುಷ್ಠಾನಕ್ಕೆ ಅಗತ್ಯವಾಗಿದೆ.
2018 ರ ಏಪ್ರಿಲ್‌ನಲ್ಲಿ ದೆಹಲಿ ಸರ್ಕಾರ ಇ - ಪೋಸ್ ವ್ಯವಸ್ಥೆಯ ಮೂಲಕ ಪಡಿತರ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಇ-ಪೋಸ್ ಸಾಧನಗಳನ್ನು ಶೀಘ್ರವಾಗಿ ಪುನಾರಂಭಿಸಬೇಕು ಎಂಬುದರ ಕುರಿತು ದೆಹಲಿ ಸರ್ಕಾರಕ್ಕೆ ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಪತ್ರಗಳನ್ನು ಬರೆದಿರುವ ಗೋಯಲ್, "ಬಡ ವಲಸಿಗರಿಗೆ ಅಡೆತಡೆಗಳನ್ನು ಸೃಷ್ಟಿಸುವುದನ್ನು ನಿಲ್ಲಿಸಿ, ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯನ್ನು ಜಾರಿಗೆ ತರಬೇಕು" ಎಂದರು.
ಈ ವಿಷಯದ ಬಗ್ಗೆ ಗೋಯಲ್ ಪತ್ರ ಬರೆದಿದ್ದರೂ ದೆಹಲಿ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಕೂಡ ಜೂನ್ 8 ರಂದು ದೆಹಲಿ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಈಗಾಗಲೇ, 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಎನ್‌ಒಆರ್‌ಸಿ ಯೋಜನೆಯಡಿ ತರಲಾಗಿದ್ದು, ಇದರ ಮೂಲಕ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿ ಫಲಾನುಭವಿಗಳು ದೇಶದ ಯಾವುದೇ ಭಾಗದಿಂದ ತಮ್ಮ ಪಡಿತರ ಪಡೆಯಬಹುದು.