ನವದೆಹಲಿ: ಭಯದ ವಾತಾವರಣ ಸೃಷ್ಟಿ ಮಾಡಬೇಡಿ ಎಂದು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಸುಪ್ರೀಂ ಕೋರ್ಟ್ ಮಂಗಳವಾರ ಸೂಚನೆ ನೀಡಿದೆ. ಛತ್ತೀಸ್‌ಗಢ ಅಬಕಾರಿ ಹಗರಣದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಸಿಲುಕಿಸಲು ಜಾರಿ ನಿರ್ದೇಶನಾಲಯ ಪ್ರಯತ್ನಿಸುತ್ತಿದೆ ಎಂದು ರಾಜ್ಯ ಸರ್ಕಾರ ವಿಚಾರಣೆಯಲ್ಲಿ ಗಂಭೀರ ಆರೋಪ ಮಾಡಿತು. ಈ ಸಂದರ್ಭದಲ್ಲಿ ತನಿಖಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಈ ಸೂಚನೆ ನೀಡಿದೆ.
ಛತ್ತೀಸ್‌ಗಢ ಸರ್ಕಾರದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ಜಾರಿ ನಿರ್ದೇಶನಾಲಯ ಅಬಕಾರಿ ಅಧಿಕಾರಿಗಳಿಗೆ ಬೆದರಿಸುತ್ತಿದೆ ಎಂದು ಆರೋಪಿಸಿದರು. ಇಡಿ ತಮ್ಮ ಕುಟುಂಬದ ಸದಸ್ಯರಿಗೆ ಬೆದರಿಸುತ್ತಿದೆ ಹಾಗೂ ಬಂಧಿಸುತ್ತೇವೆ ಎಂದು ಹೇಳುತ್ತಿದೆ ಎಂದು ಹಲವು ಅಬಕಾರಿ ಅಧಿಕಾರಿಗಳು ದೂರಿದ್ದಾರೆ ಎಂದು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಎ.ಅಮಾನುಲ್ಲಾ ಅವರ ಪೀಠದ ಮುಂದೆ ವಿವರಿಸಿದರು.
ಇಡಿ ಅವ್ಯವಹಾರ ನಡೆಸುತ್ತಿದೆ. ಅವರು ಅಬಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದು ಆಘಾತಕಾರಿ ಪರಿಸ್ಥಿತಿಯಾಗಿದೆ. ಈಗ ಚುನಾವಣೆಗಳು ಬರುತ್ತಿವೆ ಮತ್ತು ಅದಕ್ಕಾಗಿಯೇ ಇದು ನಡೆಯುತ್ತಿದೆ ಎಂದು ಛತ್ತೀಸ್‌ಗಢ ಸರ್ಕಾರದ ಪರ ವಾದ ಮಂಡಿಸಿದ ಕಪಿಲ್ ಸಿಬಲ್ ಪೀಠಕ್ಕೆ ತಿಳಿಸಿದರು. ಇಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಆರೋಪಗಳಿಗೆ ಪ್ರತಿವಾದ ಮಂಡಿಸಿ, ರಾಜ್ಯದಲ್ಲಿ ನಡೆದಿರುವ ಹಗರಣದ ತನಿಖೆಯನ್ನು ಸಂಸ್ಥೆ ನಡೆಸುತ್ತಿದೆ ಎಂದರು. ಅದಕ್ಕೆ, "ನೀವು ಈ ರೀತಿ ವರ್ತಿಸಿದಾಗ ಸತ್ಯವಾದ ಕಾರಣವೂ ಸಹ ಶಂಕಿತವಾಗುತ್ತದೆ. ಭಯದ ವಾತಾವರಣ ಸೃಷ್ಟಿ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಮೌಖಿಕವಾಗಿ ಜಾರಿ ನಿರ್ದೇಶನಾಲಯಕ್ಕೆ ಹೇಳಿದೆ. ಸಣ್ಣ ನಡೆ ಕೂಡ ನೀವು ಹೀಗೆ ಮಾಡುತ್ತಿದ್ದೀರಿ ಎಂದು ಅಂದುಕೊಳ್ಳುವುದಕ್ಕೆ ಎಡೆ ಮಾಡಿಕೊಡುತ್ತದೆ" ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಕಳೆದ ತಿಂಗಳು, ಛತ್ತೀಸ್‌ಗಢ ಸರ್ಕಾರ ಸಾಮಾನ್ಯ ಕಾರ್ಯನಿರ್ವಹಣೆಯನ್ನು ಬೆದರಿಕೆ, ಕಿರುಕುಳ ಮತ್ತು ತೊಂದರೆ ನೀಡಲು ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಕೆಲವು ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಕೀಲ ಸುಮೀರ್ ಸೋಧಿ ಮೂಲಕ ಮೂಲ ದಾವೆ ಹೂಡಿತ್ತು. ಸಂವಿಧಾನದ 131 ನೇ ವಿಧಿಯ ಅಡಿಯಲ್ಲಿ ಕೇಂದ್ರ ಅಥವಾ ಇತರ ಯಾವುದೇ ರಾಜ್ಯದೊಂದಿಗೆ ವಿವಾದದ ವಿಷಯಗಳಲ್ಲಿ ನೇರವಾಗಿ ಸುಪ್ರೀಂ ಕೋರ್ಟ್‌ಗೆ ತೆರಳಲು ರಾಜ್ಯಕ್ಕೆ ಅಧಿಕಾರ ನೀಡುವ ಕಾನೂನನ್ನು ಪ್ರಶ್ನಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಸಂಸ್ಥೆ ಆರಂಭಿಸಿರುವ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಛತ್ತೀಸ್‌ಗಢ ಮೂಲದ ಇಬ್ಬರು ವ್ಯಕ್ತಿಗಳು ಸಲ್ಲಿಸಿದ ಮನವಿಯನ್ನು ಮಂಗಳವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಅವರಲ್ಲಿ ಒಬ್ಬನನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಬಂಧಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಸಂಸ್ಥೆ ಆರಂಭಿಸಿರುವ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಹಾಗೂ ತನಿಖೆಯ ಸಂದರ್ಭದಲ್ಲಿ ಇಡಿ ಅಧಿಕಾರಿಗಳು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಅಬಕಾರಿ ಇಲಾಖೆಯ 52 ಅಧಿಕಾರಿಗಳು ಲಿಖಿತವಾಗಿ ದೂರು ನೀಡಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಏನಿದು ಪ್ರಕರಣ?: 2022ರ ಆದಾಯ ತೆರಿಗೆ ಇಲಾಖೆಯ ಚಾರ್ಜ್ ಶೀಟ್‌ನಿಂದ ದೆಹಲಿಯ ನ್ಯಾಯಾಲಯದಲ್ಲಿ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ. 2019-22ರಲ್ಲಿ ಛತ್ತೀಸ್‌ಗಢದಲ್ಲಿ ಮದ್ಯ ವ್ಯಾಪಾರದಲ್ಲಿ ಭಾರಿ ಹಗರಣ ನಡೆದಿದೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿತ್ತು. ಉನ್ನತ ಮಟ್ಟದ ರಾಜ್ಯ ಸರ್ಕಾರಿ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು ಮತ್ತು ರಾಜಕೀಯ ಅಧಿಕಾರಿಗಳನ್ನೊಳಗೊಂಡ ಸಿಂಡಿಕೇಟ್ 2 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ಹಣವನ್ನು ಗಳಿಸಿದ್ದಾರೆ ಎಂದು ಹೇಳಿತ್ತು.
ಇದನ್ನೂ ಓದಿ: 5 ದಿನ ಸಿಬಿಐ ಕಸ್ಟಡಿಗೆ ದೆಹಲಿ ಸಚಿವ ಮನೀಶ್ ಸಿಸೋಡಿಯಾ; ಆಪ್ನಿಂದ ತೀವ್ರ ಪ್ರತಿಭಟನೆ