ನವದೆಹಲಿ: 2024ರಲ್ಲಿ ಎದುರಾಗಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯ ಗತಾಯ ಮಣಿಸಲೇ ಬೇಕೆಂದು ವಿಪಕ್ಷಗಳು ಪಣತೊಟ್ಟು ರಣತಂತ್ರಗಳನ್ನು ರೂಪಿಸುತ್ತಿವೆ. ಈಗಿನಿಂದಲೇ ಸಿದ್ಧತೆಗಳನ್ನು ಆರಂಭಿಸಿದ್ದು, ಸಾರ್ವತ್ರಿಕ ಚುನಾವಣೆಗೆ ಜಂಟಿ ನೀತಿಗಳನ್ನು ಹೆಣೆಯಲು ದೆಹಲಿಯಲ್ಲಿಂದು ವಿಪಕ್ಷಗಳ ಮೊದಲ ಸಭೆ ನಡೆಯಲಿದೆ.
ನ್ಯಾಷನಲ್ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಹಾಗೂ ಟಿಎಂಸಿ ಮುಖಂಡ ಯಶವಂತ ಸಿನ್ಹಾ ಜಂಟಿ ಅಧ್ಯಕ್ಷತೆಯಲ್ಲಿ ಸಭೆಯನ್ನು ಆಯೋಜಿಸಲಾಗಿದೆ. ರಾಜಕೀಯ ಹಾಗೂ ಚುನಾವಣಾ ನೀತಿ ತಜ್ಞ ಪ್ರಶಾಂತ್ ಕಿಶೋರ್ ವಿಪಕ್ಷಗಳ ಹಿಂದೆ ನಿಂತ ಯೋಜನೆಗಳನ್ನು ಹಾಕಿಕೊಡುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಶಾಂತ್ ಕಿಶೋರ್, 3 ಅಥವಾ 4ನೇ ರಂಗ ಬಿಜೆಪಿಗೆ ಸಾವಾಲಾಗಲಿದೆ ಎಂಬುದನ್ನು ನಾನು ನಂಬುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಇದು ನನ್ನ ಕೊನೆ ಫೇಸ್ಬುಕ್ ಪೋಸ್ಟ್... ಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ 24ರ ಯುವತಿ
ನಿನ್ನೆ ಶರದ್ ಪವಾರ್ ಅವರನ್ನು ಪಿಕೆ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಸಭೆಗೆ ಈಗಾಗಲೇ ಯಶವಂತ ಸಿನ್ಹಾ ಅವರ ಕಡೆಯಿಂದ ಆರ್‌ಜೆಡಿ ಮುಖಂಡ ಮನೋಜ್ ಝಾ, ಎಎಪಿಯಿಂದ ಸಂಜಯ್ ಸಿಂಗ್ ಹಾಗೂ ಕಾಂಗ್ರೆಸ್ ಮುಖಂಡ ವಿವೇಕ್ ತಂಖಾ ಅವರನ್ನು ಆಹ್ವಾನಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಿ ಸಮಾನಾದ ಪೈಪೋಟಿ ನೀಡುವಂತ ಅಭ್ಯರ್ಥಿಯನ್ನು ತಯಾರು ಮಾಡುವುದು ವಿಪಕ್ಷಗಳ ಉದ್ದೇಶವಾಗಿದೆ. ಇತ್ತೀಚೆಗೆ ಪಿಕೆ ಅವರ ರಣನೀತಿಯಿಂದಲೇ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರು ಮತ್ತೊಮ್ಮೆ ಚುನಾವಣೆಯಲ್ಲಿ ಜಯ ಸಾಧಿಸಿದ್ದರು ಎನ್ನಲಾಗಿದೆ.