ರೂರ್ಕಿ(ಉತ್ತರಾಖಂಡ): ಸಣ್ಣ ತಪ್ಪು ಭಾರಿ ದಂಡಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಡೊಮಿನೋಸ್ ಪಿಜ್ಜಾ ಸಾಕ್ಷಿಯಾಗಿದೆ. ಗ್ರಾಹಕರೊಬ್ಬರಿಗೆ ಸಸ್ಯಾಹಾರಿ ಪಿಜ್ಜಾ ಬದಲಾಗಿ ಮಾಂಸವುಳ್ಳ ಪಿಜ್ಜಾ ಕಳುಹಿಸಿದ್ದಕ್ಕೆ ಗ್ರಾಹಕ ಆಯೋಗದಿಂದ ದಂಡಕ್ಕೊಳಗಾಗಿ 9 ಲಕ್ಷ ರೂಪಾಯಿ ತೆತ್ತಿದೆ.
ಯಡವಟ್ಟಾಯ್ತು: ಉತ್ತರಾಖಂಡದ ರೂರ್ಕಿ ನಿವಾಸಿಯಾದ ಶಿವಾಂಗ್ ಮಿತ್ತಲ್ ಎಂಬುವವರು 26 ಅಕ್ಟೋಬರ್ 2020 ರಂದು ರಾತ್ರಿ 8.30 ಕ್ಕೆ ಆನ್‌ಲೈನ್‌ನಲ್ಲಿ ಸಸ್ಯಾಹಾರಿ ಪಿಜ್ಜಾ ಟ್ಯಾಕೋ ಮತ್ತು ಚೋಕೊ ಲಾವಾ ಕೇಕ್ ಅನ್ನು ಆರ್ಡರ್ ಮಾಡಿದ್ದಾರೆ. ಡೊಮಿನೋಸ್ ಪಿಜ್ಜಾ ಉದ್ಯೋಗಿ ಮನೆಗೆ ಪ್ಯಾಕೆಟ್‌ನಲ್ಲಿ ಪಿಜ್ಜಾ ತಂದು ಕೊಟ್ಟಿದ್ದಾರೆ. ಇದಕ್ಕಾಗಿ 918 ರೂ. ಪಡೆದುಕೊಂಡಿದ್ದಾರೆ.
ಶಿವಾಂಗ್ ಮಿತ್ತಲ್ ಪ್ಯಾಕೆಟ್ ತೆರೆದು ತಿಂದಾಗ ಇದು ಮಾಂಸಾಹಾರಿ ಪಿಜ್ಜಾ ಎಂದು ತಿಳಿದು ಬಂದಿದೆ. ಇದರಿಂದ ಶಿವಾಂಗ್ ಮಿತ್ತಲ್ ವಾಂತಿ ಮಾಡಿಕೊಂಡಿದ್ದಾರೆ. ಇದರಿಂದ ಅವರ ಆರೋಗ್ಯ ಹದಗೆಟ್ಟಿತು. ಗ್ರಾಹಕರು ಮತ್ತು ಅವರ ಇಡೀ ಕುಟುಂಬ ಸಂಪೂರ್ಣವಾಗಿ ಸಸ್ಯಾಹಾರಿಯಾಗಿತ್ತು.
ಗ್ರಾಹಕರಿಂದ ದೂರು: ಇದರಿಂದ ನೊಂದ ಗ್ರಾಹಕರು ಪಿಜ್ಜಾ ಕಂಪನಿ ಡೊಮಿನೋಸ್ ವಿರುದ್ಧ ಗಂಗಾನಹರ್ ರೂರ್ಕಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇದ್ದಾಗ ಗ್ರಾಹಕ ಆಯೋಗದ ಬಾಗಿಲು ತಟ್ಟಿದ್ದಾರೆ. ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷ ಕನ್ವರ್ ಸೈನ್, ಸದಸ್ಯರಾದ ಅಂಜನಾ ಚಡ್ಡಾ ಮತ್ತು ವಿಪಿನ್ ಕುಮಾರ್ ಅವರು ಎರಡೂ ಕಡೆಯ ವಾದವನ್ನು ಆಲಿಸಿದ್ದಾರೆ. ಪಿಜ್ಜಾ ಕಂಪನಿಯಿಂದ ಸಸ್ಯಾಹಾರಿ ಪಿಜ್ಜಾ ಆರ್ಡರ್ ಬದಲಾಗಿ ಮಾಂಸಾಹಾರಿ ಪಿಜ್ಜಾ ಕಳುಹಿಸಿರುವುದು ಸಾಬೀತಾಗಿದೆ.
ಬಿತ್ತು 9 ಲಕ್ಷ ರೂ. ದಂಡ: ಸಂಪೂರ್ಣ ಸಸ್ಯಾಹಾರಿಯಾದ ಗ್ರಾಹಕರಿಗೆ ಡೊಮಿನೋಸ್ ಪಿಜ್ಜಾ ಮಾಂಸಾಹಾರಿ ಪಿಜ್ಜಾವನ್ನು ಪೂರೈಸಿ ಅವರ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿದೆ. ಇದು ಗ್ರಾಹಕರ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಹಾನಿ ಉಂಟು ಮಾಡಿದಂತೆ. ಹೀಗಾಗಿ ಡೊಮಿನೋಸ್ ಪಿಜ್ಜಾ ಕಂಪನಿ ಶೇ.6 ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಗ್ರಾಹಕರಿಗೆ ಒಂದು ತಿಂಗಳೊಳಗೆ 4.5 ಲಕ್ಷ ರೂಪಾಯಿ ಆರ್ಥಿಕ ಪರಿಹಾರ ನೀಡಬೇಕು.
ಅಲ್ಲದೇ, ವಿಶೇಷ ಹಾನಿಯಾಗಿ 5 ಲಕ್ಷ ರೂ. ಪರಿಹಾರ ನೀಡಬೇಕು. ಸಂತ್ರಸ್ತ ಗ್ರಾಹಕರಿಗೆ ಒಟ್ಟು 9 ಲಕ್ಷ 65 ಸಾವಿರದ 918 ರೂಪಾಯಿಯನ್ನು ಕಂಪನಿ ಪರಿಹಾರವಾಗಿ ಪಾವತಿಸಬೇಕು ಎಂದು ಆದೇಶಿಸಿದೆ.