ಝಾನ್ಸಿ, ಉತ್ತರಪ್ರದೇಶ: ಜಿಲ್ಲೆಯಲ್ಲಿ ಬೀದಿ ನಾಯಿಗಳು ಅಟ್ಟಹಾಸ ಮೆರೆದಿವೆ. ಏಳು ವರ್ಷದ ಮಗುವಿನ ಮೇಲೆ ನಾಯಿಗಳು ಏಕಾಏಕಿ ದಾಳಿ ನಡೆಸಿದ್ದು, ಮಗುವನ್ನು ಕಚ್ಚಿ ಗಾಯಗೊಳಿಸಿವೆ. ಇದರಿಂದ ಮಗು ತೀವ್ರ ಗಾಯಗೊಂಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಘಟನೆಯಿಂದ ಕುಟುಂಬಸ್ಥರು ಅಲ್ಲದೇ ಈ ಭಾಗದ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಝಾನ್ಸಿಯಲ್ಲಿ ಬೀದಿನಾಯಿಗಳನ್ನು ಹಿಡಿಯಲು ನಗರಸಭೆ ಯಾವುದೇ ಪ್ರಯತ್ನ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಬೀದಿ ನಾಯಿಗಳ ಕಾಟದ ಜತೆಗೆ ದಾಳಿಯ ಘಟನೆಗಳೂ ಹೆಚ್ಚುತ್ತಿವೆ ಎನ್ನುತ್ತಿದ್ದಾರೆ ಸ್ಥಳೀಯರು. ಝಾನ್ಸಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನರಸಿಂಗ್ ರಾವ್ ಟೋರಿಯಾದ ಜಾರ್ಜ್ಖಾಡಿಯಾ ನಿವಾಸಿ ಏಳು ವರ್ಷದ ವಿರಾಜ್ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿ ವಿರಾಜ್ ಶಾಲೆಯಿಂದ ಸಂಜೆ ಮನೆಗೆ ಮರಳುತ್ತಿದ್ದ.
ವಿರಾಜ್ ಮನೆಯ ಸಮೀಪಕ್ಕೆ ಬರುತ್ತಿದ್ದಂತೆ ಬೀದಿ ನಾಯಿಗಳು ದಾಳಿ ನಡೆಸಿವೆ. ನಾಯಿಗಳು ವಿರಾಜ್ನನ್ನು ಸುತ್ತುವರೆದು ಕೆಟ್ಟದಾಗಿ ಕಚ್ಚಿವೆ. ಅಷ್ಟರಲ್ಲಿ ಮಗುವಿನ ಸದ್ದು ಕೇಳಿದ ತಾಯಿ ಓಡಿ ಬಂದು ನಾಯಿಗಳನ್ನು ಓಡಿಸಿದರು. ಹೀಗಾಗಿ ವಿರಾಜ್‌ನ ಪ್ರಾಣ ಉಳಿದಂತಾಯಿತು. ಕೂಡಲೇ ಪೋಷಕರು ಮತ್ತು ಸಂಬಂಧಿಕರು ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿದ್ದು, ದೃಶ್ಯಗಳು ನಗರದ ಜನತೆಯನ್ನು ಬೆಚ್ಚಿಬೀಳಿಸಿವೆ.
ಗಾಯಾಳು ಮಗುವಿನ ತಾಯಿ ನೆರೆಮನೆಯವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಅವರು ಪ್ರತಿನಿತ್ಯ ಬೀದಿನಾಯಿಗಳಿಗೆ ಮಾಂಸವನ್ನು ತಿನ್ನಿಸುತ್ತಾರೆ ಎಂದು ಆರೋಪಿಸಿದ್ದಾರೆ. ಇದರಿಂದಾಗಿ ನಾಯಿಗಳ ಕಾಟ ಹೆಚ್ಚಾಗಿದೆ. ಈ ನಾಯಿಗಳು ಪ್ರದೇಶದ ಪ್ರತಿ ಮನೆಯ ಒಬ್ಬರ ಮೇಲೆ ದಾಳಿ ಮಾಡುತ್ತಿವೆ. ನಾವು ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಷ್ಟೇ ಅಲ್ಲ ನಗರಸಭೆಗೆ ದೂರು ನೀಡಿದರೂ ಸಹ ನಾಯಿ ಹಿಡಿಯಲು ಸಿಬ್ಬಂದಿ ಬರುತ್ತಿಲ್ಲ. ಈಗ ಈ ಬಗ್ಗೆ ಪೊಲೀಸರಿಗೆ ಮತ್ತು ನಗರಸಭೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡುತ್ತೇವೆ. ಆಗಲೂ ಕ್ರಮ ಕೈಗೊಳ್ಳದಿದ್ದರೆ ಒಟ್ಟಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಗಾಯಾಳು ಮಗುವಿನ ತಾಯಿ ಹೇಳಿದ್ದಾರೆ.
ಝಾನ್ಸಿಯ ಅಬ್ಬೋಟ್ ಮಾರ್ಕೆಟ್, ತಾಲ್ಪುರ ಸಿವಿಲ್ ಲೈನ್, ಸಿಪ್ರಿ ಬಜಾರ್, ಗೋವಿಂದ್ ಚೌರಾಹಾ ಸೇರಿದಂತೆ ಹಲವೆಡೆ ಬೀದಿನಾಯಿಗಳ ಕಾಟ ತೀವ್ರಗೊಂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಇವುಗಳ ಬಗ್ಗೆ ನಗರಸಭೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಮಾತು ಕೇಳಿ ಬಂದಿದೆ. ಅಷ್ಟೇ ಅಲ್ಲ ಬೀದಿ ನಾಯಿಗಳ ಕಾಟ ಕುರಿತು ನಗರಸಭೆ ಅಧಿಕಾರಿಗಳ ಪ್ರತಿಕ್ರಿಯೆ ಏನೆಂಬುದು ಕಾದು ನೋಡಬೇಕಾಗಿದೆ.
ಓದಿ: Police Dog: ಕೋಲಾರ: 24 ಗಂಟೆಯೊಳಗೆ ಕೊಲೆ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸ್ ಶ್ವಾನ!