ಗಯಾ(ಬಿಹಾರ): ತಾನು ಸಾಕಿದ ನಾಯಿ ಬೆಳಗ್ಗೆ ತನ್ನೊಂದಿಗೆ ವಾಕ್ ಮಾಡಲಿಲ್ಲ ಎಂದು ಕೋಪಗೊಂಡ ಮಾಲೀಕ ನಾಯಿಯನ್ನು ಸರಪಳಿಯಿಂದ ಬೈಕ್ನ ಹಿಂಭಾಗಕ್ಕೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದಿರುವ ಅಮಾನುಷ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ. ಕಿಲೋಮೀಟರ್ ದೂರ ಬೈಕ್ನಲ್ಲಿ ಎಳೆದೊಯ್ಯುತ್ತಿರುವುದನ್ನು ನೋಡಿದ ಕಾರು ಸವಾರನೊಬ್ಬ ನಾಯಿಯ ಮಾಲೀಕನನ್ನು ಏನು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದಾಗ ಯಾವುದೇ ನಾಚಿಕೆಯಿಲ್ಲದೇ ನಾಯಿಯನ್ನು ಎಳೆದೊಯ್ಯುತ್ತಿದ್ದೇನೆ ಎಂದು ಉತ್ತರಿಸಿದ್ದಾನೆ.
ಸ್ವಲ್ಪ ದೂರದವರೆಗೆ ಓಡಿಕೊಂಡು ಬಂದಿರುವ ನಾಯಿ, ನಂತರ ಅಸ್ವಸ್ಥಗೊಂಡಿದೆ. ಅಸ್ವಸ್ಥಗೊಂಡಿದ್ದರೂ ಎಳೆದುಕೊಂಡೇ ಮಾಲೀಕ ಬೈಕ್ನಲ್ಲಿ ಸಾಗಿದ್ದಾನೆ. ಅಸ್ವಸ್ಥಗೊಂಡಿದ್ದ ನಾಯಿ ರಕ್ತದಲ್ಲಿ ತೊಯ್ದು ಹೋಗಿದೆ. ಈ ಸಂಪೂರ್ಣ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ತಾನೇ ಮುದ್ದಿನಿಂದ ಸಾಕಿದ ನಾಯಿಯನ್ನು ಈ ರೀತಿ ಅಮಾನವೀಯವಾಗಿ ಎಳೆದೊಯ್ಯಲು ಆತನಿಗೆ ಮನಸ್ಸು ಬರುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಲೀಕನ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಗಯಾ ನಗರದ ಗಾಂಧಿ ಮೈದಾನದಲ್ಲಿ ನಡೆದಿದೆ. ಮಾತು ಬಾರದ ಮೂಕ ಪ್ರಾಣಿ, ಅಸ್ವಸ್ಥಗೊಂಡು ಸಾಯುವ ಸ್ಥಿತಿ ತಲುಪಿದೆ. ಇನ್ನೂ ಸ್ವಲ್ಪ ಹೆಚ್ಚು ಹೊತ್ತು ಹಾಗೆಯೇ ಎಳೆದೊಯ್ದಿದ್ದರೆ ನಾಯಿ ಪ್ರಾಣವನ್ನೇ ಕಳೆದುಕೊಳ್ಳುತ್ತಿತ್ತು. ನಾಯಿಯ ಮುಖ, ಕಾಲು ಸೇರಿದಂತೆ ದೇಹದ ಕೆಲವು ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ನಾಯಿಯನ್ನು ಈ ರೀತಿ ರಸ್ತೆಯಲ್ಲಿ ಎಳೆದೊಯ್ದವರು ಡೆಲ್ಹಾ ನಿವಾಸಿ ಎಂದು ಹೇಳಲಾಗಿದೆ. ಇಲ್ಲಿ ಬೈಕ್ ಸವಾರನನ್ನು ತಡೆದು ನಾಯಿಯ ಪ್ರಾಣ ಉಳಿಸಿರುವ ಕಾರು ಸವಾರನ ದೊಡ್ಡತನಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ವೀಡಿಯೋ ಮಾಡಿದ ಕಾರು ಚಾಲಕ: ನಾಯಿಯನ್ನು ಬೈಕ್ನಲ್ಲಿ ಕಟ್ಟಿ ಎಳೆದೊಯ್ಯುತ್ತಿರುವ ದೃಶ್ಯವನ್ನು ನೋಡಿದ ಕಾರು ಸವಾರ ವೀಡಿಯೋ ಮಾಡಿದ್ದಾನೆ. ನಾಯಿಯ ಮಾಲೀಕನನ್ನು ತರಾಟೆಗೆ ತೆಗೆದುಕೊಂಡಿರುವ ಕಾರು ಸವಾರ ನಾಯಿಯನ್ನು ಹತ್ತಿರದ ಜಾಗದಲ್ಲಿ ಕಟ್ಟಿ ಹಾಕಿ ಚಿಕಿತ್ಸೆ ಕೊಡಿಸುವಂತೆ ಬೈಕ್ ಸವಾರನಿಗೆ ತಿಳಿಸಿದ್ದಾನೆ. ನಾಯಿ ಮಾಲೀಕ ಮಾತ್ರ ತಾನು ಮಾಡಿರುವ ಅಮಾನವೀಯ ಕೃತ್ಯದ ಬಗ್ಗೆ ಕೊಂಚವೂ ನಾಚಿಕೆ ಪಡದೇ, ನಾಯಿ ತನ್ನೊಂದಿಗೆ ಬೆಳಗ್ಗೆ ನಾಯಿ ವಾಕ್ ಬರಲಿಲ್ಲ ಎಂಬುದರ ಬಗ್ಗೆಯೇ ಮಾತನಾಡುತ್ತಿದ್ದನು. ಈ ವೇಳೆ ಸುತ್ತಮುತ್ತಲಿನ ಜನ ಜಮಾಯಿಸಿದ್ದು, ನಾಯಿ ಮಾಲೀಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾಯಿಗೆ ಏನಾದರೂ ತೊಂದರೆಯಾದರೆ ದೂರು ನೀಡುವುದಾಗಿ ಸೂಚಿಸಿದ್ದಾರೆ.
ಪ್ರಾಣಿಹಿಂಸೆಗೆ ಕಾನೂನು ಏನು ಹೇಳುತ್ತದೆ?: ಭಾರತದಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟಲು 1960 ರಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯನ್ನು ತರಲಾಗಿದೆ. ಈ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ 1962 ರಲ್ಲಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಲಾಯಿತು. ಪ್ರಾಣಿಗಳಿಗೆ ಅನಗತ್ಯ ಶಿಕ್ಷೆ ಅಥವಾ ಪ್ರಾಣಿ ಹಿಂಸೆಯ ಪ್ರವೃತ್ತಿಯನ್ನು ತಡೆಯುವುದು ಈ ಕಾಯಿದೆಯ ಉದ್ದೇಶವಾಗಿದೆ.
ಕ್ರೌರ್ಯ ತಡೆ ಕಾಯ್ದೆ: ವಿಷಯಕ್ಕೆ ಸಂಬಂಧಿಸಿದಂತೆ ಹಲವು ವಿಧದ ನಿಬಂಧನೆಗಳನ್ನು ಈ ಕಾಯ್ದೆಯಲ್ಲಿ ಸೇರಿಸಲಾಗಿದೆ. ಪ್ರಾಣಿಗಳ ಮಾಲೀಕರು ತಮ್ಮ ಸಾಕುಪ್ರಾಣಿಗಳನ್ನು ದಾರಿತಪ್ಪಿ ಬಿಟ್ಟರೆ ಅಥವಾ ಚಿಕಿತ್ಸೆ ನೀಡದಿದ್ದರೆ, ಹಸಿವಿನಿಂದ ಮತ್ತು ಬಾಯಾರಿಕೆಯಿಂದ ಇರಿಸಿದರೆ, ಅಂತಹ ವ್ಯಕ್ತಿಯು ಪ್ರಾಣಿ ಹಿಂಸೆಯ ಅಡಿ ತಪ್ಪಿತಸ್ಥನಾಗಿರುತ್ತಾನೆ.
ಪ್ರಾಣಿ ಹಿಂಸೆ ಪ್ರಕರಣದಲ್ಲಿ ಶಿಕ್ಷೆಯ ನಿಬಂಧನೆ: ಬೀದಿ ನಾಯಿಯನ್ನು ಹೊಡೆಯುವುದು ಐಪಿಸಿ ಸೆಕ್ಷನ್ 428, 429 ಮತ್ತು ಪಿಸಿಎ ಕಾಯ್ದೆಯ ಸೆಕ್ಷನ್ 11 ರ ಅಡಿ ಶಿಕ್ಷಾರ್ಹ ಅಪರಾಧವಾಗಿದೆ. ಸರ್ಕಾರದ ನೀತಿ ಮತ್ತು ಅನಿಮಲ್ ಬರ್ತ್ ಕಂಟ್ರೋಲ್ 2011 ರ ಅಡಿಯಲ್ಲಿ, ಈ ಬೀದಿ ನಾಯಿಗಳ ಭೀತಿ ಇರುವ ಪ್ರದೇಶದಲ್ಲಿ, ಅವುಗಳ ಮೇಲೆ ಕ್ರಿಮಿನಾಶಕ ಸಿಂಪಡಿಸಬಹುದು. ಆದರೆ ಕೊಲ್ಲುವ ಹಾಗಿಲ್ಲ. ಈ ಬೀದಿ ನಾಯಿಗಳು ಅಥವಾ ಜಾನುವಾರುಗಳಿಗೆ ಕಿರುಕುಳ ನೀಡಿದರೆ ಅಥವಾ ಅವುಗಳನ್ನು ಕೊಲ್ಲಲು ಪ್ರಯತ್ನಿಸಿದರೆ, ಪೊಲೀಸ್ ಠಾಣೆಯಲ್ಲಿ ಪ್ರಾಣಿ ಹಿಂಸೆಯ ಪ್ರಕರಣವನ್ನು ದಾಖಲಿಸಬಹುದು.
ಇದನ್ನೂ ಓದಿ: ಕಾರಿಗೆ ನಾಯಿ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಆರೋಪ: ಸರ್ಕಾರಿ ಆಸ್ಪತ್ರೆ ವೈದ್ಯನ ವಿರುದ್ಧ ಪ್ರಕರಣ