ಪ್ರಯಾಗ್ರಾಜ್(ಉತ್ತರ ಪ್ರದೇಶ): ಏಳು ತಿಂಗಳ ಮಗುವಿನ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗುವನ್ನು (ಭ್ರೂಣ) ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯ ನಂತರ ಮಗುವಿನ ಹೊಟ್ಟೆಯಿಂದ ಎರಡು ಕಿಲೋ ತೂಕದ ಭ್ರೂಣವನ್ನು ಹೊರತೆಗೆಯಲಾಯಿತು. ಮಗು ಕೂಡ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಸದ್ಯ ಮಗುವನ್ನು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ. ತಾಯಿಯ ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣದೊಳಗೆ ಮತ್ತೊಂದು ಭ್ರೂಣದ ರಚನೆಯಿಂದಾಗಿ ಇಂತಹ ಪ್ರಕರಣಗಳು ಮುನ್ನೆಲೆಗೆ ಬರುತ್ತವೆ ಎಂದು ವೈದೈರು ಹೇಳುತ್ತಾರೆ.
ಈ ಮಗು ಪ್ರತಾಪಗಢ ಜಿಲ್ಲೆಯ ಕುಂದಾ ನಿವಾಸಿ ಸಂದೀಪ್ ಶುಕ್ಲಾ ಅವರಿಗೆ ಸೇರಿದೆ. ಸುಮಾರು ಏಳು ತಿಂಗಳ ಹಿಂದೆ, ಸಂದೀಪ್ ಶುಕ್ಲಾ ಪತ್ನಿ ಇನ್ನೊಂದು ಮಗನಿಗೆ ಜನ್ಮ ನೀಡಿದ್ದರು. ಆದರೆ ಅನಾರೋಗ್ಯದ ಸಮಸ್ಯೆಯಿಂದ ಮಗುವಿನ ತಾಯಿ ಮೃತಪಟ್ಟರು. ಪುಟ್ಟ ಮಗುವಿಗೆ ಹುಟ್ಟಿನಿಂದಲೇ ಹೊಟ್ಟೆ ಊದಿಕೊಂಡಿತ್ತು. ಸಂದೀಪ್ ಮೊದಲು ವೈದ್ಯರಿಗೆ ಮಗುವನ್ನು ತೋರಿಸಿದ್ದರು. ಪರಿಹಾರ ಸಿಗದಿದ್ದಾಗ ಲಕ್ನೋದ ಕೆಲ ವೈದ್ಯರಿಗೆ ಸಂಪರ್ಕಿಸಿ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ವೈದ್ಯರು ಪರೀಕ್ಷೆಗೆ ಸೂಚಿಸಿದ್ದಾರೆ.
ಸಂದೀಪ್ ಹೆಂಡತಿಯ ಮರಣದ ನಂತರ, ಅವರು ಎರಡೂ ಮಕ್ಕಳನ್ನು ನೋಡಿಕೊಳ್ಳುತ್ತಾ ಕಷ್ಟದಿಂದ ಬದುಕು ಸಾಗಿಸುತ್ತಿದ್ದರು. ಈ ಕಾರಣಕ್ಕಾಗಿ, ಲಕ್ನೋದ ವೈದ್ಯರು ಅನೇಕ ಪರೀಕ್ಷೆಗಳನ್ನು ಸೂಚಿಸಿದರು, ಅದನ್ನು ಮಾಡಲು ಸಾಧ್ಯವಾಗಲಿಲ್ಲ. ಮಗುವಿನ ಹೊಟ್ಟೆಯೂ ದಿನದಿಂದ ದಿನಕ್ಕೆ ಉಬ್ಬಿಕೊಳ್ಳತೊಡಗಿತು. ಏಳು ತಿಂಗಳ ವಯಸ್ಸಿನಲ್ಲಿ, ಮಗುವಿಗೆ ಉಸಿರಾಟದ ತೊಂದರೆ ಪ್ರಾರಂಭವಾಯಿತು. ಮಗು ಆಹಾರ ಮತ್ತು ನೀರನ್ನು ತ್ಯಜಿಸಿತು. ಆದ್ದರಿಂದ ತೂಕವು ಕಡಿಮೆಯಾಗತೊಡಗಿತು. ಮತ್ತೊಮ್ಮ ಲಕ್ನೋದಲ್ಲಿರುವ ಆಸ್ಪತ್ರೆಗೆ ಮಗುವನ್ನು ಕೊಂಡೊಯ್ದ ತಂದೆಗೆ ಹಣದ ಕೊರತೆಯಿಂದಾಗಿ ಮಗುವಿನ ಪರೀಕ್ಷೆ ಮತ್ತು ಚಿಕಿತ್ಸೆ ಕೊಡಿಸಲು ಸಾಧ್ಯವಾಗಲಿಲ್ಲ.
ಸ್ಕ್ಯಾನ್ ಮಾಡಿದಾಗ ಭ್ರೂಣ ಪತ್ತೆ : ಇದಾದ ಬಳಿಕೆ ಕೆಲವರ ಸಲಹೆ ಮೇರೆಗೆ ಸಂದೀಪ್ ವಾರದ ಹಿಂದೆ ಮಗುವನ್ನು ಸರೋಜಿನಿ ನಾಯ್ಡು ಬಾಲ ಚಿಕಿತ್ಸಾಲಯಕ್ಕೆ ಕರೆತಂದಿದ್ದಾರೆ. ಈ ವೇಳೆ ಮಗುವಿನ ಹೊಟ್ಟೆಯಲ್ಲಿ ಗಡ್ಡೆ ಇರುವುದಾಗಿ ವೈದ್ಯರು ಶಂಕಿಸಿದ್ದಾರೆ. ಸಿಟಿ ಸ್ಕ್ಯಾನ್ ಮಾಡಿದ ವೇಳೆ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಇರುವುದು ಪತ್ತೆಯಾಗಿದೆ. ಇದಾದ ಬಳಿಕ ಶುಕ್ರವಾರ ಡಾ. ಡಿ. ಕುಮಾರ್, ಡಾ. ನೀತು, ಡಾ. ಅರವಿಂದ್ ಯಾದವ್ ಅವರ ತಂಡ ನಾಲ್ಕು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಮಗುವಿನ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಹೊರತೆಗೆದಿದ್ದಾರೆ.
ಈ ಕುರಿತು ಡಾ. ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಮಗು ಸಂಪೂರ್ಣ ಸುರಕ್ಷಿತವಾಗಿದೆ. ಸದ್ಯ ಮಗು ವೈದ್ಯರ ಮೇಲ್ವಿಚಾರಣೆಯಲ್ಲಿದ್ದು, ಆಸ್ಪತ್ರೆಯ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ.
ಝೈಗೋಟ್ ರೂಪುಗೊಂಡಾಗ ಹೀಗಾಗುತ್ತೆ: ವೀರ್ಯ ಮತ್ತು ಅಂಡಾಣು ಸೇರಿ ಎರಡು ಝೈಗೋಟ್‌ಗಳು ರೂಪುಗೊಂಡಾಗ ಹೊಟ್ಟೆಯಲ್ಲಿ ಭ್ರೂಣ ಬೆಳೆಯುತ್ತದೆ ಎಂದು ಆಪರೇಷನ್ ಮಾಡಿದ ವೈದ್ಯ ಡಾ. ಡಿ. ಕುಮಾರ್ ಹೇಳಿದ್ದಾರೆ. ಮಗು ಮೊದಲ ಝೈಗೋಟ್ನಿಂದ ರೂಪುಗೊಳ್ಳುತ್ತದೆ ಮತ್ತು ಎರಡನೆಯದು ಮಗುವಿನ ಹೊಟ್ಟೆಗೆ ಹೋಗುತ್ತದೆ. ಈ ಭ್ರೂಣವು ಹೊಟ್ಟೆಯಲ್ಲಿ ಗೆಡ್ಡೆಯಂತೆ ಬೆಳೆಯಲು ಪ್ರಾರಂಭಿಸುತ್ತದೆ. ಈ ಸ್ಥಿತಿಯನ್ನು ಹೊಟ್ಟೆಯಲ್ಲಿ ಭ್ರೂಣ ಎಂದು ಕರೆಯಲಾಗುತ್ತದೆ. ಎರಡನೇ ಝೈಗೋಟ್ ಮಗುವಿನ ದೇಹದ ಹೊರಗೆ ಅಂದರೆ ತಾಯಿಯ ಗರ್ಭದಲ್ಲಿ ಬೆಳವಣಿಗೆಯಾದರೆ ಅದು ಅವಳಿ ಮಗುವಾಗುತ್ತವೆ ಎಂದಿದ್ದಾರೆ.
ಇದನ್ನೂ ಓದಿ: ವಜ್ರದ ಗಣಿಯಿಂದ 10 ಲಕ್ಷ ರೂ. ಮೌಲ್ಯದ ವಜ್ರ ಪತ್ತೆ: ರೈತರಿಗೆ ಖುಲಾಯಿಸಿದ ಅದೃಷ್ಟ