ಲಖನೌ, ಉತ್ತರಪ್ರದೇಶ: ರಾಜಧಾನಿಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರತಿ ದಿನ ನನ್ನ ಹೆಂಡ್ತಿ ನನಗೆ ಹೊಡೆಯುತ್ತಾಳೆ. ದಯವಿಟ್ಟು ಆಕೆಯಿಂದ ನನನ್ನು ಕಾಪಾಡಿ ಎಂದು ಗಂಡನೊಬ್ಬ ತನ್ನ ಪತ್ನಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಲಖನೌದಲ್ಲಿ ಕಂಡು ಬಂದಿದೆ.
'ಸರ್ ನನ್ನ ಪತ್ನಿ ಕಳೆದ ಆರು ವರ್ಷಗಳಿಂದ ಪ್ರತಿದಿನ ಜೋರಾದ ಶಬ್ದದಿಂದ ಹಾಡು ಕೇಳುತ್ತಾಳೆ. ಈ ಬಗ್ಗೆ ನಾನು ವಿರೋಧ ವ್ಯಕ್ತಪಡಿಸಿದಾಗ ಆಕೆ ನನ್ನನ್ನು ಹೊಡೆಯುತ್ತಾಳೆ. ದಯವಿಟ್ಟು ನನ್ನನ್ನು ಕಾಪಾಡಿ'.. ಇದು ಗೋಮತಿ ನಗರದಲ್ಲಿ ವಾಸಿಸುವ ವೈದ್ಯರೊಬ್ಬರ ನೋವಿನ ಸಂಗತಿ ಆಗಿದೆ. ವೈದ್ಯರೊಬ್ಬರು ತಮ್ಮ ಪತ್ನಿ ವಿರುದ್ಧ ಲಖನೌ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲ ವೈದ್ಯನ ಪತ್ನಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗಂಡನಿಗೆ ಕಿರುಕುಳ ನೀಡುವ ಪತ್ನಿ: ನಾವಿಬ್ಬರು 2017ರಲ್ಲಿ ಮದುವೆಯಾಗಿದ್ದೇವೆ. ಮದುವೆಯಾದ ನಂತರ ಪತ್ನಿ ಕಿರುಕುಳ ನೀಡುತ್ತಿದ್ದು, ಇದರಿಂದ ಒತ್ತಡದಲ್ಲಿ ಜೀವನ ಸಾಗಿಸಲು ಆರಂಭಿಸಿದೆ. ಪತ್ನಿ ಹಗಲಿರುಳು ಜೋರಾಗಿ ಹಾಡುಗಳನ್ನು ಕೇಳುತ್ತಾಳೆ. ಇದರಿಂದ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲ ಜೋರಾಗಿ ಹಾಡು ಕೇಳುವುದನ್ನು ನಾನು ವಿರೋಧಿಸಿದಾಗ ಆಕೆ ನನ್ನ ಮೇಲೆ ಹಲ್ಲೆ ಮಾಡುತ್ತಾಳೆ. ಜೊತೆಗೆ ಮನೆಯ ವಸ್ತುಗಳನ್ನು ಒಡೆದು ಚೆಲ್ಲಾಪಿಲ್ಲಿ ಮಾಡುತ್ತಾಳೆ ಎಂದು ಗೋಮತಿನಗರದಲ್ಲಿ ವಾಸವಾಗಿರುವ ಸಂತ್ರಸ್ತ ವೈದ್ಯ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ನನ್ನ ಪತ್ನಿಯಿಂದಲೇ ನನಗೆ ಅಪಾಯವಿದೆ: ಪತ್ನಿ ರಾತ್ರಿಯಿಡೀ ಮೊಬೈಲ್‌ನಲ್ಲಿ ಕೆಲ ಯುವಕರೊಂದಿಗೆ ಮಾತನಾಡುತ್ತಾಳೆ. ಯಾರೊಂದಿಗೆ ಮಾತನಾಡುತ್ತಿದ್ದೆ ಎಂದು ಕೇಳಿದರೆ ನನ್ನ ಮೇಲೆ ಹಲ್ಲೆಗೆ ಮುಂದಾಗುತ್ತಾಳೆ. ಆ ಪರಿಸ್ಥಿತಿಯಲ್ಲಿ ನನ್ನ ದೈಹಿಕ ಮತ್ತು ಮಾನಸಿಕ ಸ್ಥಿತಿ ಹದಗೆಡುತ್ತಿದೆ. ತನ್ನ ಹೆಂಡತಿ ತನ್ನ ದಿವಂಗತ ತಾಯಿಯನ್ನು ಯಾವಾಗಲೂ ನಿಂದಿಸುತ್ತಿರುತ್ತಾಳೆ. ನನಗೆ ನನ್ನ ಪತ್ನಿಯಿಂದಲೇ ಅಪಾಯವಿದೆ. ಹೀಗಾಗಿ ನನಗೆ ರಕ್ಷಣೆ ನೀಡಿ ಎಂದು ಪತಿ ಪೊಲೀಸರಿಗೆ ನೀಡಿದ ದೂರಿನ ಮೂಲಕ ಮನವಿ ಮಾಡಿದ್ದಾರೆ.
ವೈದ್ಯರ ದೂರಿನ ಬಗ್ಗೆ ಪೊಲೀಸ್ ಠಾಣಾ ಅಧಿಕಾರಿ ದೀಪಕ್ ಪಾಂಡೆ ಮಾತನಾಡಿ, ದಂಪತಿ ನಡುವೆ ವಿವಾದ ಉಂಟಾಗಿದೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಓದಿ: ಕಾರಿನ ಚಕ್ರದಡಿ ಸಿಲುಕಿ ಹಲವು ಮೀಟರ್ ದೂರ ಎಳೆದೊಯ್ಯಲ್ಪಟ್ಟು ವ್ಯಕ್ತಿ ಸಾವು