ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಲು ಪಾಕಿಸ್ತಾನ ಕಾರಣ ಎಂದ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಖಡಖ್ ಪ್ರಶ್ನೆ ಕೇಳಿದೆ. ಪಾಕ್ನಲ್ಲಿ ನಾವು ಕೈಗಾರಿಕೆಗಳನ್ನು ನಿಷೇಧಿಸಬೇಕಾ ಎಂದು ಪ್ರಶ್ನಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಪೀಠವು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದೆ. ದೆಹಲಿ ಮಾಲಿನ್ಯಕ್ಕೆ ಉತ್ತರ ಪ್ರದೇಶದ ಕಾರ್ಖಾನೆಗಳಿಂದ ಬರುವ ಹೊಗೆಯೂ ಮುಖ್ಯ ಕಾರಣ. ಹೀಗಾಗಿ ಕೈಗಾರಿಕಾ ಚಟುವಟಿಕೆ ಅವಧಿ ಕಡಿಮೆ ಮಾಡಬೇಕು ಎಂದು ವಾಯು ಗುಣಮಟ್ಟ ನಿರ್ವಹಣಾ ಆಯೋಗ (CAQM) ಸಲ್ಲಿಸಿದ್ದ ಅರ್ಜಿಯನ್ನು ಇಂದು ಕೋರ್ಟ್ ವಿಚಾರಣೆ ನಡೆಸಿದೆ.
ಇದನ್ನೂ ಓದಿ: ದೆಹಲಿ ವಾಯು ಮಾಲಿನ್ಯ ಹೆಚ್ಚಳಕ್ಕೆ ಸುಪ್ರೀಂಕೋರ್ಟ್ ಕೆಂಡಾಮಂಡಲ
ವಿಚಾರಣೆ ವೇಳೆ, ಯುಪಿ ಸರ್ಕಾರ ಪರ ವಕೀಲ ರಂಜಿತ್ ಕುಮಾರ್ ಅವರು, ಉತ್ತರ ಪ್ರದೇಶದ ಕಲುಷಿತ ಗಾಳಿಯು ಕೆಳಮುಖವಾಗಿ ಹೋಗುತ್ತದೆ. ಅದು ದೆಹಲಿಯ ಕಡೆಗೆ ಹೋಗುವುದಿಲ್ಲವಾದ್ದರಿಂದ ಯುಪಿಯಲ್ಲಿನ ಕೈಗಾರಿಕೆಗಳು ರಾಷ್ಟ್ರ ರಾಜಧಾನಿಯ ಮಾಲಿನ್ಯದಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ. ಕೈಗಾರಿಕೆಗಳನ್ನು ಮುಚ್ಚುವುದಕ್ಕೆ ನಮ್ಮ ಆಕ್ಷೇಪವಿದೆ. ಕೈಗಾರಿಕೆಗಳಿಗೆ ಕೇವಲ 8 ಗಂಟೆಗಳ ಕಾಲ ಕೆಲಸ ಮಾಡಲು ಅವಕಾಶ ನೀಡುವ ನಿರ್ಧಾರವು ಕಬ್ಬು ಮತ್ತು ಹಾಲಿನ ಡೈರಿ ಉದ್ಯಮಗಳ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ಪಾಕಿಸ್ತಾನದ ಕಲುಷಿತ ಗಾಳಿಯು ದೆಹಲಿಯ ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಾದಿಸಿದ್ದಾರೆ.
ಇದಕ್ಕೆ ಕಿಡಿಕಾರಿದ ಸಿಜೆಐ, ಪಾಕಿಸ್ತಾನದಲ್ಲಿ ನಾವು ಕೈಗಾರಿಕೆಗಳನ್ನು ನಿಷೇಧಿಸಬೇಕೆಂದು ನೀವು ಬಯಸುತ್ತೀರಾ? ಎಂದು ವಕೀಲ ರಂಜಿತ್ಗೆ ಪ್ರಶ್ನಿಸಿದರು.