ಲಂಡನ್ : ನೀವು ನಿಮ್ಮ ನಾಯಿ ಮತ್ತು ಬೆಕ್ಕುಗಳ ರಕ್ಷಣೆಗಾಗಿ ಸ್ಮಾರ್ಟ್ ಕಾಲರ್, ಜಿಪಿಎಸ್ ಟ್ರ್ಯಾಕಿಂಗ್ ಅಪ್ಲಿಕೇಶನ್, ಸ್ವಯಂಚಾಲಿತ ಫೀಡರ್‌ಗಳು ಮತ್ತು ಪಿಇಟಿ ಕ್ಯಾಮೆರಾಗಳನ್ನು ಬಳಸುತ್ತೀರಾ? ಹಾಗಾದರೆ ಕೊಂಚ ಹುಷಾರಾಗಿರಿ.. ಸಾಕುಪ್ರಾಣಿಗಳು ಮತ್ತು ಪ್ರಾಣಿ ಸಂಬಂಧಿತ ಸಾಫ್ಟವೇರ್ ಅಪ್ಲಿಕೇಶನ್‌ಗಳು ಅವುಗಳ ಮಾಲೀಕರಿಗೆ ಸೈಬರ್ ಸುರಕ್ಷತೆಯ ಅಪಾಯಗಳನ್ನು ಸೃಷ್ಟಿಸುತ್ತಿವೆ ಎಂದು ಹೊಸ ಸಂಶೋಧನೆಯೊಂದು ತೋರಿಸಿದೆ.
ಸಾಕುಪ್ರಾಣಿಗಳು ಮತ್ತು ಇತರ ಒಡನಾಡಿ ಹಾಗೂ ಕೃಷಿ ಪ್ರಾಣಿಗಳ ಸಂರಕ್ಷತೆಗಾಗಿ ಬಳಸುವ ಸುಮಾರು 40 ಜನಪ್ರಿಯ ಆ್ಯಂಡ್ರಾಯ್ಡ್ ಆ್ಯಪ್ಗಳನ್ನು ನ್ಯೂಕ್ಯಾಸಲ್ ಮತ್ತು ಲಂಡನ್ ವಿಶ್ವವಿದ್ಯಾನಿಲಯಗಳ ಕಂಪ್ಯೂಟರ್ ವಿಜ್ಞಾನಿಗಳ ತಂಡವು ಪರಿಶೀಲನೆ ಮಾಡಿದೆ. ಈ ಆ್ಯಪ್ಗಳಿಂದ ವಿಭಿನ್ನ ರೀತಿಗಳಲ್ಲಿ ಗೌಪ್ಯತೆಗೆ ಮತ್ತು ಭದ್ರತೆಗೆ ಧಕ್ಕೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಹಲವಾರು ಅಪ್ಲಿಕೇಶನ್‌ಗಳು ತಮ್ಮ ಲಾಗಿನ್ ಅಥವಾ ಲೊಕೇಶನ್ ವಿವರಗಳನ್ನು ಬಹಿರಂಗಪಡಿಸುವ ಮೂಲಕ ಇವುಗಳ ಬಳಕೆದಾರರನ್ನು ಅಪಾಯಕ್ಕೆ ಸಿಲುಕಿಸುತ್ತಿವೆ ಎಂದು ಸಂಶೋಧನೆಗಳು ತೋರಿಸಿವೆ.
ವೇಗವಾಗಿ ಬೆಳೆಯುತ್ತಿದೆ ಪೆಟ್ ಟೆಕ್ನಾಲಜಿ: ನಿಮ್ಮ ಬೆಕ್ಕು ಅಥವಾ ನಾಯಿಗಳ ಸಂರಕ್ಷಣೆಗಾಗಿ ಬಳಸುವ ಸ್ಮಾರ್ಟ್ ಕಾಲರ್‌ಗಳು ಮತ್ತು ಜಿಪಿಎಸ್ ಟ್ರ್ಯಾಕರ್‌ಗಳಂತಹ ಪೆಟ್ ಟೆಕ್ನಾಲಜಿ ಬಹಳ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದೆ. ಆದರೆ ಇದು ಸಾಕುಪ್ರಾಣಿ ಮಾಲೀಕರಿಗೆ ಭದ್ರತೆ, ಗೌಪ್ಯತೆ ಮತ್ತು ಸುರಕ್ಷತೆಯ ಅಪಾಯಗಳನ್ನು ಒಡ್ಡುತ್ತಿದೆ ಎಂದು ನ್ಯೂಕ್ಯಾಸಲ್ ಡಾಕ್ಟರೇಟ್ ವಿದ್ಯಾರ್ಥಿ ಹಾಗೂ ಪ್ರಮುಖ ಲೇಖಕ ಸ್ಕಾಟ್ ಹಾರ್ಪರ್ ಹೇಳಿದರು.
ವಿಜ್ಞಾನಿಗಳು ಪರಿಶೀಲನೆಗೊಳಪಡಿಸಿದ ಅಪ್ಲಿಕೇಶನ್ಗಳ ಪೈಕಿ ಮೂರು ಅಪ್ಲಿಕೇಶನ್‌ಗಳು ಬಳಕೆದಾರರ ಲಾಗಿನ್ ವಿವರಗಳನ್ನು ಸುರಕ್ಷಿತವಲ್ಲದ HTTP ಟ್ರಾಫಿಕ್ ಮೂಲಕ ಸುಲಭವಾಗಿ ಸಿಗುವಂತಿವೆ. ಇದರರ್ಥ ಯಾರಾದರೂ ಈ ಅಪ್ಲಿಕೇಶನ್‌ಗಳಲ್ಲಿ ಒಂದನ್ನು ಬಳಸಿಕೊಂಡು ಯಾರೊಬ್ಬರ ಇಂಟರ್ನೆಟ್ ಟ್ರಾಫಿಕ್ ಅನ್ನು ವೀಕ್ಷಿಸಲು ಸಾಧ್ಯವಾಗಲಿದೆ. ಮತ್ತು ಅವರ ಲಾಗಿನ್ ಮಾಹಿತಿಯನ್ನು ಕಂಡುಹಿಡಿಯಲು ಇದರಿಂದ ಸುಲಭವಾಗಲಿದೆ ಕೂಡಾ. ಇಷ್ಟು ಮಾತ್ರವಲ್ಲದೇ ಎರಡು ಅಪ್ಲಿಕೇಶನ್‌ಗಳು ಸದ್ಯದ ಲೊಕೇಶನ್ ಗಳ ಮಾಹಿತಿ ಸೇರಿದಂತೆ ಬಳಕೆದಾರರ ಖಾಸಗಿ ವಿವರಗಳನ್ನು ತೋರಿಸಿವೆ. ಇದರಿಂದ ಇಂಟರ್ನೆಟ್ನ ಕನಿಷ್ಠ ಜ್ಞಾನ ಇದ್ದವರು ಡಿವೈಸ್ಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಮತ್ತು ಇಂತಹ ಡಿವೈಸ್ಗಳ ಆರಾಮಾಗಿ ಸೈಬರ್ ದಾಳಿಗೊಳಗಾಗಬಹುದು.
ಇನ್ನು ಟ್ರ್ಯಾಕರ್‌ಗಳ ಬಳಕೆ ಸಹ ಆತಂಕದ ವಿಚಾರವಾಗಿದೆ. ನಾಲ್ಕು ಅಪ್ಲಿಕೇಶನ್‌ಗಳನ್ನು ಹೊರತುಪಡಿಸಿ ಎಲ್ಲ ಅಪ್ಲಿಕೇಶನ್‌ಗಳು ಕೆಲವು ರೀತಿಯ ಟ್ರ್ಯಾಕಿಂಗ್ ಸಾಫ್ಟ್‌ವೇರ್ ಅನ್ನು ಒಳಗೊಂಡಿರುವುದು ಕಂಡು ಬಂದಿದೆ. ಟ್ರ್ಯಾಕರ್ ಅಪ್ಲಿಕೇಶನ್ ಬಳಸುವ ವ್ಯಕ್ತಿ, ಅವರು ಅದನ್ನು ಹೇಗೆ ಬಳಸುತ್ತಾರೆ ಅಥವಾ ಅವರು ಯಾವ ಸ್ಮಾರ್ಟ್‌ಫೋನ್ ಬಳಸುತ್ತಿದ್ದಾರೆ ಎಂಬ ಮಾಹಿತಿಯನ್ನ ಸಂಗ್ರಹಿಸಿರುತ್ತದೆ. ಇದು ಹ್ಯಾಕರ್ಗಳಿಗೆ ಸುಲಭ ಆಹಾರವಾಗುವ ಸಾಧ್ಯತೆಗಳು ತೀರಾ ಹೆಚ್ಚಾಗಿರುತ್ತದೆ. ಇದು ಕಳವಳಕ್ಕೆ ಕಾರಣವಾಗಿರುವ ವಿಷಯವಾಗಿದೆ.
ಬಳಕೆದಾರರಿಗೆ ತಮ್ಮ ಗೌಪ್ಯತೆ ನೀತಿಯನ್ನು ತಿಳಿಸುವ ವಿಷಯದಲ್ಲಿ ಅಪ್ಲಿಕೇಶನ್‌ಗಳು ತುಂಬಾ ಬೇಜವಾಬ್ದಾರಿಯಾಗಿ ವರ್ತಿಸುತ್ತವೆ ಎಂದು ಈಗಾಗಲೇ ತಂತ್ರಜ್ಞಾನ ಎಕ್ಸ್ಪರ್ಟ್ಗಳು ವಾರ್ನಿಂಗ್ ಕೊಟ್ಟಿದ್ದಾರೆ. ಬಳಕೆದಾರರು ತಮ್ಮ ಯಾವುದೇ ಮಾಹಿತಿಯನ್ನು ಟ್ರ್ಯಾಕ್ ಮಾಡಲು ಅನುಮತಿ ನೀಡುವ ಮುನ್ನವೇ ಇಂಥ 21 ಅಪ್ಲಿಕೇಶನ್‌ಗಳು ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸಲಾರಂಭಿಸುತ್ತವೆ ಎಂದು ತಂತ್ರಜ್ಞಾನದ ಎಕ್ಸ್ಪರ್ಟ್ಗಳು ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಈ ಟ್ರ್ಯಾಕಿಂಗ್ ಅಪ್ಲಿಕೇಶನ್‌ಗಳನ್ನು ಬಳಸುವ ಯಾರೇ ಆಗಿದ್ದರೂ, ತಾವು ಯುನಿಕ್ ಪಾಸ್ವರ್ಡ್ ಬಳಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ : ಪಕ್ಷಿಗಳ ಟ್ರ್ಯಾಕಿಂಗ್: ಕೊಕ್ಕರೆ ಬೆಳ್ಳೂರಿನಲ್ಲಿ ವಿದೇಶಿ ಹಕ್ಕಿಗಳಿಗೆ ಜಿಪಿಎಸ್ ಟ್ಯಾಗ್ ಅಳವಡಿಕೆ