ಮಧುರೈ: ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಪುತ್ರ ಸಚಿವ ಉದಯನಿಧಿ ಸ್ಟಾಲಿನ್ ಅವರ ವಿರುದ್ಧ ಬಿಜೆಪಿ ಐಟಿ ಸಂಯೋಜಕ ಅಮಿತ್ ಮಾಳವೀಯ ಮಾನಹಾನಿಕರ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿ, ಡಿಎಂಕೆ ಲೀಗಲ್ ವಿಂಗ್ ದೂರು ದಾಖಲಿಸಿದೆ.
ಮಧುರೈ ನಗರದ ಡಿಎಂಕೆ ಲೀಗಲ್ ವಿಂಗ್ನ ಜಿಲ್ಲಾ ಸಂಘಟಕರು ಮಧುರೈ ನಗರ ಪೊಲೀಸ್ ಕಮಿಷನರ್ಗೆ ಔಪಚಾರಿಕ ದೂರನ್ನು ಸಲ್ಲಿಸಿದ್ದಾರೆ. ದೂರಿನಲ್ಲಿ ಸಚಿವ ಉಧಯನಿಧಿ ಸ್ಟಾಲಿನ್ ಅವರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಟ್ವೀಟ್ ಮಾಡಿರುವ ಬಿಜೆಪಿ ಈಟಿ ಸಂಯೋಜಕ ಅಮಿತ್ ಮಾಳವೀಯ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.
ಸೆಪ್ಟೆಂಬರ್ 3 ರಂದು ಸಚಿವ ಉದಯನಿಧಿ ಅವರ ವಿಡಿಯೋವನ್ನು ಹಂಚಿಕೊಂಡ ಅಮಿತ್ ಮಾಳವೀಯ ಅವರು, ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಅನುಸರಿಸುವ ಭಾರತದ ಶೇ 80ರಷ್ಟು ಜನರ ನರಮೇಧಕ್ಕೆ ಕರೆ ನೀಡಿದ್ದಾರೆ ಎಂದು ಆರೋಪಿಸಿ ಟ್ವೀಟ್ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸೆಪ್ಟೆಂಬರ್ 2 ರಂದು ಸಚಿವ ಉದಯನಿಧಿ ಸ್ಟಾಲಿನ್ ಪ್ರಗತಿಪರ ಲೇಖಕರ ಸಮಾರಂಭವೊಂದರಲ್ಲಿ ಭಾಷಣ ಮಾಡುವ ವೇಳೆ, ಸನಾತನ ಧರ್ಮವನ್ನು ಸಾಮಾಜಿಕ ಅನಿಷ್ಟ ಎಂದು ಉಲ್ಲೇಖಿಸಿ, ಅದನ್ನು ಕೋವಿಡ್ -19, ಡೆಂಘೀ ಹಾಗೂ ಮಲೇರಿಯಾದಂತಹ ಕಾಯಿಲೆಗಳಿಗೆ ಹೋಲಿಸಿ, ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಹೇಳಿದಲ್ಲಿಂದ ಈ ವಿವಾದ ಪ್ರಾರಂಭವಾಗಿದೆ. ಉದಯನಿಧಿ ಭಾಷಣದ ವಿಡಿಯೋವನ್ನು ಅಮಿತ್ ಮಾಳವೀಯ ಅವರು ಹಂಚಿಕೊಂಡು ಸಚಿವರು ಸನಾತನ ಧರ್ಮದ ಅನುಯಾಯಿಗಳ ನರಮೇಧವನ್ನು ಸಮರ್ಥಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಮಾಳವೀಯ ಟ್ವೀಟ್ಗೆ ಪ್ರತಿಕ್ರಿಯಿಸಿದ ಸಚಿವ ಉದಯನಿಧಿ, ನಾನು ಎಂದಿಗೂ ನರಮೇಧಕ್ಕೆ ಕರೆ ನೀಡಿಲ್ಲ. ಸನಾತನ ಧರ್ಮ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಜನರನ್ನು ವಿಭಜನೆ ಮಾಡುತ್ತದೆ ಎಂದ ಒತ್ತಿ ಹೇಳಿದ್ದರು. ತಂತೈ ಪೆರಿಯಾರ್ ಹಾಗೂ ಡಾ. ಅಂಬೇಡ್ಕರ್ ಅವರ ಬರಹಗಳ ಆಧಾರದ ಮೇಲೆ ಆಳವಾದ ಸಂಶೋಧನೆಗೆ ಒತ್ತಾಯಿಸಿ, ಮಾನವೀಯತೆ ಹಾಗೂ ಮಾನವ ಸಮಾನತೆಯ ಪರವಾಗಿ ಅದನ್ನು ಬೇರು ಸಹಿತ ಕಿತ್ತು ಹಾಕಲು ಕರೆ ನೀಡಿದ್ದರು.
ತಮ್ಮ ಹೇಳಿಕೆಯ ಬಗ್ಗೆ ಉದಯನಿಧಿ ಸ್ಟಾಲಿನ್ ಅವರು ಸ್ಪಷ್ಟನೆ ನೀಡಿದರೂ ಅಮಿತ್ ಮಾಳವೀಯ ಅವರು ಮಾತ್ರ ಕ್ಷಮೆ ಯಾಚನೆ ಅಥವಾ ತಮ್ಮ ಹೇಳಿಕೆಯನ್ನು ಹಿಂಪಡೆಯಲಿಲ್ಲ. ಹಾಗಾಗಿ ಡಿಎಂಕೆ ಲೀಗಲ್ ವಿಂಗ್ ಮಾಳವೀಯ ಅವರ ಹೇಳಿಕೆಯು ಸಮಾಜದೊಳಗೆ ದ್ವೇಷ ಹಾಗೂ ಕೋಮು ಸೌಹಾರ್ದತೆ ಕೆಡಿಸಲು ಪ್ರಚೋದನೆ ನೀಡುವ ಉದ್ದೇಶದಿಂದ ಮಾಡಲ್ಪಟ್ಟಿದೆ ಎಂದು ದೂರಿದೆ.
ಇದನ್ನೂ ಓದಿ: 'ಎಲ್ಲಿ ಬೇಕಾದರೂ ಅದನ್ನೇ ಹೇಳುವೆ'.. ಸನಾತನ ಧರ್ಮ ವಿವಾದಿತ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡ ಉದಯನಿಧಿ ಸ್ಟಾಲಿನ್