ಹಮೀರ್ಪುರ(ಹಿಮಾಚಲ ಪ್ರದೇಶ): ಎಲ್ಲೆಡೆ ದೀಪಾವಳಿ ಸಂಭ್ರಮ ಆರಂಭವಾಗಿದೆ. ಬಡವ, ಶ್ರೀಮಂತ ಎನ್ನದೇ ಎಲ್ಲರೂ ಕೂಡಾ ತಮ್ಮ ತಮ್ಮ ಮನೆಗಳಲ್ಲಿ ದೀಪಾವಳಿ ಹಬ್ಬ ಆಚರಿಸಲು ತನ್ನದೇ ಆದ ರೀತಿಯಲ್ಲಿ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಆದರೆ ಹಿಮಾಚಲ ಪ್ರದೇಶ ರಾಜ್ಯದ ಈ ಗ್ರಾಮದಲ್ಲಿ ದೀಪಾವಳಿ ಹಬ್ಬದ ಸಂಭ್ರಮವಿಲ್ಲ.
ಹಿಮಾಚಲ ಪ್ರದೇಶದ ಜಿಲ್ಲೆಯಾದ ಹಮೀರ್ಪುರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಸಮ್ಮು ಗ್ರಾಮದ ಜನರು ದೀಪಾವಳಿ ಹಬ್ಬವನ್ನು ಆಚರಣೆ ಮಾಡುತ್ತಿಲ್ಲ. ಇದು ಇತ್ತೀಚಿನ ಬೆಳವಣಿಗೆ ಅಲ್ಲ. ನೂರಾರು ವರ್ಷಗಳಿಂದಲೂ ಕೂಡಾ ದೀಪಾವಳಿ ಹಬ್ಬ ಈ ಗ್ರಾಮದಲ್ಲಿ ನಿಷಿದ್ಧ.
ದೀಪ ಬೆಳಗಬಹುದು: ದೀಪಾವಳಿ ಹಬ್ಬದಂದು ಸಮ್ಮು ಗ್ರಾಮದ ಜನರು ದೀಪ ಬಳಗಬಹುದು. ಆದರೆ ಪಟಾಕಿ ಹಚ್ಚುವುದು ಮನೆಯಲ್ಲಿ ಹಬ್ಬದ ಅಡುಗೆ ಮಾಡಿದರೆ ಯಾವುದಾದರೂ ಆಪತ್ತು ಖಂಡಿತಾ ಬಂದೊದಗುತ್ತದೆ ಎಂದು ಇಲ್ಲಿನ ಜನರ ನಂಬಿಕೆ. ಆದ್ದರಿಂದ ಇಲ್ಲಿ ಯಾರೂ ಕೂಡಾ ದೀಪಾವಳಿ ಹಬ್ಬ ಆಚರಣೆ ಮಾಡುವುದಿಲ್ಲ. ಕೆಲವರು ಇದೊಂದು ಮೌಢ್ಯ ಎಂದು ಹಬ್ಬ ಆಚರಿಸಲು ಮುಂದಾಗಿ ವಿಪತ್ತುಗಳನ್ನು ಎದುರಿಸಿದ ಉದಾಹರಣೆ ಇರುವ ಕಾರಣದಿಂದ ಇತ್ತೀಚೆಗೆ ಯಾರೂ ಕೂಡಾ ದೀಪಾವಳಿ ಹಬ್ಬದ ಆಚರಣೆಗೆ ಮುಂದಾಗಿಲ್ಲ.
ದೀಪಾವಳಿ ಹಬ್ಬದಂದು ಮನೆಯಿಂದ ಹೊರಗೆ ಹೋಗುವುದೂ ಕೂಡಾ ತಪ್ಪು ಎಂದು ಅಲ್ಲಿನ ಜನರು ಭಾವಿಸಿದ್ದಾರೆ. ಕಾಕತಾಳೀಯವೋ ಅಥವಾ ಶಾಪವೋ ದೀಪಾವಳಿ ತಿಂಗಳಲ್ಲೇ ಯಾರಾದರೊಬ್ಬರ ಸಾವು ಗ್ರಾಮದಲ್ಲಿ ಸಂಭವಿಸುತ್ತದೆ. ಬೇರೆ ಗ್ರಾಮಕ್ಕೆ ತೆರಳಿ ದೀಪಾವಳಿ ಆಚರಣೆ ಕೂಡಾ ಮಾಡುವಂತಿಲ್ಲ.
ಜನರು ಹೇಳುವ ಕಥೆ ಏನು?: ನೂರಾರು ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಓರ್ವ ಮಹಿಳೆ ತನ್ನ ಪತಿಯೊಂದಿಗೆ ವಾಸವಿದ್ದಳು. ಪತಿ ರಾಜನೊಬ್ಬನ ಸೇನೆಯಲ್ಲಿ ಕೆಲಸ ಮಾಡುತ್ತಿದ್ದನು. ಪತಿ ಸೇನೆಗೆ ತೆರಳಿದಾಗ ಮಹಿಳೆ ದೀಪಾವಳಿ ಹಬ್ಬಕ್ಕೆ ತನ್ನ ತವರು ಮನೆಗೆ ತೆರಳಿದ್ದಾಳೆ. ಕಾಕತಾಳೀಯವೆಂಬಂತೆ ಪತಿ ಸೇನೆಯಲ್ಲೇ ಸಾವನ್ನಪ್ಪಿದ್ದಾನೆ. ಗರ್ಭಿಣಿಯಾಗಿದ್ದ ಆಕೆಯನ್ನು ಆಗಿನ ಕಂದಾಚಾರದಂತೆ, ಪತಿಯ ಜೊತೆಯಲ್ಲಿಯೇ ಆಕೆಯನ್ನು ಚಿತೆಗೇರಿಸಲಾಯಿತು(ಸತಿ ಸಹಗಮನ ಪದ್ಧತಿ).
ಆಕೆ ಚಿತೆಗೇರುವ ಮುನ್ನ ಗ್ರಾಮಕ್ಕೆ ಶಾಪವನ್ನು ನೀಡುತ್ತಾಳೆ. ಈ ಗ್ರಾಮದಲ್ಲಿ ದೀಪಾವಳಿ ಹಬ್ಬ ಆಚರಿಸಬಾರದೆಂದೂ, ಹಬ್ಬ ಆಚರಿಸಿದರೆ ವಿಪತ್ತು ಸಂಭವಿಸುತ್ತದೆ ಎಂದೂ ಶಾಪ ನೀಡುತ್ತಾಳೆ. ಅಲ್ಲಿಂದ ಇಲ್ಲಿಯವರೆಗೆ ಆ ಗ್ರಾಮದಲ್ಲಿ ದೀಪಾವಳಿ ಹಬ್ಬ ಆಚರಿಸಲು ಜನರು ಮುಂದಾಗಿಲ್ಲ. ಅದರ ಬದಲಿಗೆ ದೀಪಾವಳಿ ಹಬ್ಬದಂದು 'ಸತಿ'ಯ ಮೂರ್ತಿಗೆ ಪೂಜೆ ಮಾಡಲಾಗುತ್ತದೆ.
ಶಾಪದಿಂದ ಮುಕ್ತಿಗೊಳಿಸಲು ಯಜ್ಞ: ಸುಮಾರು ಮೂರು ವರ್ಷಗಳ ಹಿಂದೆ ಮಹಿಳೆಯ ಶಾಪದಿಂದ ಮುಕ್ತಿ ಹೊಂದಲು ದೊಡ್ಡ ಪ್ರಮಾಣದಲ್ಲಿ ಹೋಮ-ಹವನಗಳನ್ನು ಮಾಡಲಾಯಿತು. ಆದರೆ ಅದೆಲ್ಲವೂ ವಿಫಲವಾಗಿದ್ದು, ದೀಪಾವಳಿ ಹಬ್ಬ ಆಚರಿಸಲು ಸಾಧ್ಯವಾಗಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗ್ರಾಮಸ್ಥೆ ಊರ್ಮಿಳಾ ತಾನು ಈ ಊರಿಗೆ ಮದುವೆಯಾಗಿ ಬಂದಾಗಿನಿಂದ ದೀಪಾವಳಿ ಹಬ್ಬ ಆಚರಿಸಿರುವುದು ಕಂಡಿಲ್ಲ. ಗ್ರಾಮದಿಂದ ಹೊರಟು ಬೇರೆ ಕಡೆ ಹೋಗಿ ನೆಲೆಸಿರುವ ಜನರಿಗೂ ಸತಿ ಕಾಡಿಸುತ್ತಾಳೆ. ಗ್ರಾಮದ ಕುಟುಂಬವೊಂದು ಗ್ರಾಮದಿಂದ ಹೊರಗೆ ಹೋಗಿ ವಾಸ ಮಾಡುತ್ತಿತ್ತು. ಅವರು ದೀಪಾವಳಿ ಹಬ್ಬದಂದು ತಿಂಡಿ ಮಾಡುವ ವೇಳೆ ಮನೆಗೆ ಬೆಂಕಿ ಬಿದ್ದಿತ್ತು ಎಂದಿದ್ದಾಳೆ. ಆದ್ದರಿಂದ ದೀಪಾವಳಿ ಹಬ್ಬದಂದು ಇಲ್ಲಿ ಸತಿಯನ್ನು ಪೂಜಿಸಿ, ಆಕೆಯ ಮುಂದೆ ಮಾತ್ರ ದೀಪಗಳನ್ನು ಬೆಳಗಿಸಲಾಗುತ್ತದೆ.
ಇದನ್ನು ಓದಿ: ಉ.ಪ್ರದೇಶ ವಿಧಾನಸಭಾ ಚುನಾವಣೆ: ಚಿಕ್ಕಪ್ಪನ ಪಕ್ಷದೊಂದಿಗೆ ಅಖಿಲೇಶ್ ಮೈತ್ರಿ