ವಡೋದರಾ (ಗುಜರಾತ್): ವಡೋದರಾ ಜಿಲ್ಲೆಯ ಪದ್ರಾ ತಾಲೂಕಿನ ಗಮೇಥಾ ಗ್ರಾಮದಲ್ಲಿ ಬುಧವಾರ ಮನಕಲಕುವ ಘಟನೆ ನಡೆದಿದೆ. ಗ್ರಾಮದಲ್ಲಿರುವ ಏಕೈಕ ಸ್ಮಶಾನದಲ್ಲಿ 68 ವರ್ಷದ ದಲಿತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲು ಮೇಲ್ಜಾತಿಯವರು ಅವಕಾಶ ನೀಡಲಿಲ್ಲ. ಹೀಗಾಗಿ, 15 ಗಂಟೆಗಳ ಕಾಲ ಮೃತದೇಹವನ್ನಿಟ್ಟು ಜನರು ಕಾದು ಕುಳಿತ ಘಟನೆ ವರದಿಯಾಗಿದೆ.
ಸ್ಮಶಾನದಲ್ಲೇ ಅಂತಿಮ ಸಂಸ್ಕಾರ ನಡೆಸುವಂತೆ ದಲಿತ ಸಮುದಾಯದವರು ಒತ್ತಾಯಿಸಿದ್ದಾರೆ. ಮುದಾಯದ ಮೇಲಿನ ಈ ಕೃತ್ಯದಿಂದ ಆಕ್ರೋಶಗೊಂಡ ದಲಿತ ಮುಖಂಡರು ಅಂತಿಮ ಸಂಸ್ಕಾರಕ್ಕೆ ಅವಕಾಶ ನೀಡದ ಗ್ರಾಮದ ಮುಖ್ಯಸ್ಥ ಸೇರಿದಂತೆ 13 ಜನರ ವಿರುದ್ಧ ವಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಗ್ರಾಮದ ಏಕೈಕ ಸ್ಮಶಾನಕ್ಕೆ ಶವಯಾತ್ರೆಯ ಮೂಲಕ ಸಮುದಾಯದವರು ಆಗಮಿಸಿದ್ದರು. ಶವ ಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗಿತ್ತು. ಅಷ್ಟರಲ್ಲಿ ಗ್ರಾಮದ ಮುಖ್ಯಸ್ಥ ನಾಗೀನ್‌ಭಾಯ್ ಪಟೇಲ್ ಎಂಬಾತ ಇತರರೊಂದಿಗೆ ಆಗಮಿಸಿ, ಅಂತ್ಯಕ್ರಿಯೆ ನಿಲ್ಲಿಸಿದ್ದಾರೆ. ಅವರು ಅಂತ್ಯಕ್ರಿಯೆಗೆ ಅವಕಾಶ ನೀಡಲಿಲ್ಲ ಎಂದು ದಲಿತ ಸಮುದಾಯದವರು ತಿಳಿಸಿದರು.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಪದ್ರಾ ತಾಲೂಕಿನ ಗೇಮಥಾ ಗ್ರಾಮದ ದಲಿತ ನಿವಾಸಿ ಕಾಂಚನಭಾಯಿ ವಾಂಕರ್ ವಯೋಸಹಜವಾಗಿ ಬುಧವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಕಾಂಚನಭಾಯಿಯವರ ಮರಣದ ನಂತರ, ಕುಟುಂಬ ಮತ್ತು ಸಮುದಾಯದವರು ದುಃಖದಲ್ಲಿದ್ದರು. ಸಮುದಾಯದ ಜನರೆಲ್ಲ ಆಗಮಿಸಿದ ನಂತರ ಅಂತಿಮ ಯಾತ್ರೆಗೆ ಸಿದ್ಧತೆ ನಡೆಸಲಾಯಿತು. ಬಳಿಕ ಮೇಲ್ಜಾತಿಯವರು ಅಂತ್ಯಕ್ರಿಯೆ ತಡೆದಿದ್ದಾರೆ.
ಗ್ರಾಮದಲ್ಲಿ ದಲಿತರಿಗಾಗಿ ಮೀಸಲಿಟ್ಟಿದ್ದ ಸ್ಥಳ ಮಳೆಯಿಂದ ಜಲಾವೃತಗೊಂಡಿದ್ದರಿಂದ ಗ್ರಾಮದಲ್ಲಿಯೇ ಮತ್ತೊಂದು ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನಡೆಸಲು ನಿರ್ಧರಿಸಲಾಯಿತು. ಆದರೆ ಕೆಲವರು ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದ ಪೊಲೀಸರು ಅಲ್ಲಿಗೆ ಆಗಮಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತಿದ್ದಾರೆ.
ಎಸ್ಪಿ ರೋಹನ್ ಆನಂದ್ ಮಾಹಿತಿ: ಮೃತರ ಕುಟುಂಬಸ್ಥರು ಠಾಣೆಗೆ ಬಂದು ಅಂತಿಮ ಸಂಸ್ಕಾರ ನಿರಾಕರಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿದರು. 13 ಜನರನ್ನು ಬಂಧಿಸಲಾಗಿದೆ. ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ. ಗ್ರಾಮದಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ ಎಂದು ವಡೋದರಾ ಎಸ್ಪಿ ರೋಹನ್ ಆನಂದ್ ಮಾಹಿತಿ ನೀಡಿದರು.
ಇದನ್ನೂ ಓದಿ: Gyanvapi: ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ; ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ