ಭುವನೇಶ್ವರ: ಪ್ರೌಢ ಶಾಲೆ, ಕಾಲೇಜು ಪಠ್ಯಕ್ರಮಗಳಲ್ಲಿ ವಿಪತ್ತು ಮತ್ತು ಸಾಂಕ್ರಾಮಿಕ ನಿರ್ವಹಣೆಯನ್ನು ಸೇರಿಸಲು ಒಡಿಶಾ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ಪದೇ ಪದೇ ಎದುರಾಗುವ ಚಂಡಮಾರುತಗಳು ಮತ್ತು ಸಾಂಕ್ರಾಮಿಕ ರೋಗಗಳಂತಹ ಅನಾಹುತಗಳಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ರಾಜ್ಯದ ಎಲ್ಲಾ ಜನರು ಸಿದ್ಧರಾಗಿರಬೇಕು. ಹಾಗಾಗಿ, ಈ ಪಠ್ಯಕ್ರಮ ಜಾರಿಗೆ ನಿರ್ಧರಿಸಿದ್ದೇವೆ ಎಂದು ಸಚಿವ ಸಂಪುಟದ ಸದಸ್ಯರು ಹೇಳಿದ್ದಾರೆ.
ಒಂದು ಸಮಯದಲ್ಲಿ ವಿಪತ್ತುಗಳಿಂದ ಜೀವಗಳನ್ನು ಕಳೆದುಕೊಂಡು ಒಡಿಶಾ ಸಂಕಷ್ಟಕ್ಕೆ ಸಿಲುಕುತ್ತಿತ್ತು. ಆದರೆ, ಈಗ ಒಡಿಶಾದ ವಿಪತ್ತು ನಿರ್ವಹಣೆ ಜಾಗತಿಕ ಮೆಚ್ಚುಗೆ ಗಳಿಸಿದೆ. ಈ ಹೊಸ ಹೆಜ್ಜೆ ವಿಪತ್ತು ನಿರ್ವಹಣೆಯಲ್ಲಿ ರಾಜ್ಯದ ಬದ್ದತೆ ತೋರಿಸಲು ಮತ್ತು ಜನರನ್ನು ಒಳಗೊಂಡ ಸಿದ್ದತೆಗಳನ್ನು ಮಾಡಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ ಎಂದು ಸರ್ಕಾರ ಹೇಳಿದೆ.
ಪ್ರತಿಯೊಬ್ಬರನ್ನು ಯೋಧರನ್ನಾಗಿ ಮತ್ತು ಜ್ಞಾನವಂತರನ್ನಾಗಿ ಮಾಡುವಂತಹ ಸಮಯ ನಮ್ಮ ಮುಂದೆ ಬಂದಿದೆ. ಇಂದು ನಾವು ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ. ತುರ್ತು ಪರಿಸ್ಥಿತಿಗಳನ್ನು ಹೇಗೆ ಎದುರಿಸಬೇಕು ಮತ್ತು ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಕುರಿತು ನಾವು ನಮ್ಮ ಜನರಿಗೆ ದೊಡ್ಡ ಪ್ರಮಾಣದಲ್ಲಿ ತರಬೇತಿ ನೀಡುತ್ತೇವೆ. ಇಂದಿನಿಂದ, ಪ್ರತಿ ಪ್ರೌಢ ಶಾಲೆಗಳು ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಪಠ್ಯಕ್ರಮದ ಭಾಗವಾಗಿ ವಿಪತ್ತು ಮತ್ತು ಸಾಂಕ್ರಾಮಿಕ ನಿರ್ವಹಣೆ ಬಗ್ಗೆ ಕಲಿಯಲಿದ್ದಾರೆ ಎಂದು ಸಿಎಂ ಪಟ್ನಾಯಕ್ ಹೇಳಿದ್ದಾರೆ.
ಇದನ್ನೂ ಓದಿ: 11th,12th ಕ್ಲಾಸ್ ವಿದ್ಯಾರ್ಥಿಗಳ ಆಂತರಿಕ ಪರೀಕ್ಷೆ ಸರಾಸರಿ ಅಂಕ ಸಲ್ಲಿಸಿ: ಸಿಐಸಿಎಸ್ಇ ಸೂಚನೆ