ನವದೆಹಲಿ: ಯಾವುದೋ ಪ್ರಚೋದನೆಯಿಂದ ಮತ್ತು ಪ್ರಚಾರದ ಹುಚ್ಚಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ವಿಧಿಸಲಾದ ದಂಡದ ಮೊತ್ತವನ್ನು, ಭೂಕಂದಾಯ ರೂಪದಲ್ಲಿ ವಸೂಲಿ ಮಾಡಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ದೆಹಲಿ ಪೊಲೀಸ್ ಕಮಿಷನರ್ರಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ದಂಡದ ಮೊತ್ತವು ವಸೂಲಿಯಾಗುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸ್ ಕಮಿಷನರ್ರಿಗೆ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಜೆಬಿ ಪಾರ್ದಿವಾಲಾ ಅವರ ಪೀಠ ಸೂಚಿಸಿದೆ.
ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ದೀಪಕ ಮಿಶ್ರಾ ಅವರ ನೇಮಕವನ್ನು ಪ್ರಶ್ನಿಸಿ ಸ್ವಾಮಿ ಓಂ (ಈಗ ದಿವಂಗತರು) ಮತ್ತು ಮುಕೇಶ್ ಜೈನ್ ಎಂಬಿಬ್ಬರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. 2017ರ ಆಗಸ್ಟ್ 24 ರಂದು ಈ ಅರ್ಜಿಯನ್ನು ಕೋರ್ಟ್ ವಜಾ ಮಾಡಿತ್ತು. ಅರ್ಜಿದಾರರ ಕೃತ್ಯವನ್ನು ಪ್ರಚಾರದ ಸ್ಟಂಟ್ ಎಂದು ಕರೆದಿದ್ದ ನ್ಯಾಯಾಲಯ, ಯಾವುದೇ ಮುಲಾಜಿಲ್ಲದೆ ಇಂಥ ಕೃತ್ಯಗಳನ್ನು ಹತ್ತಿಕ್ಕಬೇಕು ಎಂದು ಹೇಳಿತ್ತು. ಅಲ್ಲದೆ, ಈ ಅರ್ಜಿದಾರರು ಎಸಗಿದ ತಪ್ಪನ್ನು ಮುಂದೆ ಯಾರೂ ಎಸಗಕೂಡದು ಆ ರೀತಿಯಲ್ಲಿ ಇದನ್ನು ಹತ್ತಿಕ್ಕಬೇಕೆಂದು ನ್ಯಾಯಾಲಯ ಹೇಳಿತ್ತು. ಇಬ್ಬರೂ ಅರ್ಜಿದಾರರಿಗೆ ತಲಾ 10 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು.
ಮುಕೇಶ್ ಜೈನ್ ತಾನೊಬ್ಬ ಐಐಟಿ ರೂರ್ಕಿಯಿಂದ ಪದವಿ ಪಡೆದ ಎಂಜಿನಿಯರ್ (ಹಿಂದಿ ಮಾಧ್ಯಮ) ಆಗಿದ್ದು, ತಾನು ಫ್ಯಾಕ್ಟರಿ ನಡೆಸುತ್ತಿರುವುದಾಗಿ ಹಾಗೂ ಅಲ್ಲಿ ಅಲ್ಯೂಮಿನಿಯಂ ಸಂಬಂಧಿತ ಉದ್ಯಮ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದ.
ಮುಕೇಶ್ ಜೈನ್ ಈತನ ವಿಳಾಸ ಪೂರ್ಣವಾಗಿಲ್ಲ ಎಂಬ ಕಾರಣ ನೀಡಿ, ಕಟಕ್ ಜಿಲ್ಲೆಯ ಪೊಲೀಸ್ ಸೂಪರಿಂಟೆಂಡೆಂಟ್ ಆತನ ವಿರುದ್ಧ ಹೊರಡಿಸಲಾದ ಜಾಮೀನು ರಹಿತ ವಾರಂಟ್ ಅನ್ನು ಮರಳಿಸಿದ ಬಗ್ಗೆ, ಕಟಕ್ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ವರದಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಪರಿಗಣಿಸಿತ್ತು.
2022ರ ಮೇ 25 ರಂದು ಮುಕೇಶ್ ಜೈನ್ ಹೆಚ್ಚುವರಿ ಅಫಿಡವಿಟ್ ಒಂದನ್ನು ಸಲ್ಲಿಸಿದ್ದು ಅದರಲ್ಲಿ ತನ್ನ ದೆಹಲಿ ವಿಳಾಸ ಹಾಗೂ ಮೊಬೈಲ್ ನಂಬರ್ ನಮೂದಿಸಿದ್ದ.
ಹೀಗಾಗಿ ಈಗ ದೆಹಲಿ ಪೊಲೀಸ್ ಸೂಪರಿಂಟೆಂಡೆಂಟ್ ಅವರು, ಕೋರ್ಟ್ ವಿಧಿಸಿದ ದಂಡವನ್ನು ಕಾನೂನಾತ್ಮಕವಾಗಿ ಭೂಕಂದಾಯ ಬಾಕಿಯ ರೂಪದಲ್ಲಿ ವಸೂಲಿ ಮಾಡಲು ಕ್ರಮ ತೆಗೆದುಕೊಳ್ಳಬಹುದು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ತಿಳಿಸಿದರು. ಮೂರು ತಿಂಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲು ಮತ್ತು ಕ್ರಮ ಕೈಗೊಂಡ ಬಗ್ಗೆ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಆಯುಕ್ತರಿಗೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 7 ರಂದು ನಡೆಯಲಿದೆ.