ದಿಂಡೋರಿ (ಮಧ್ಯಪ್ರದೇಶ) : ಗ್ಯಾಂಗ್ರೀನ್ ಕಾಯಿಲೆಯಿಂದ ಬಳಲುತ್ತಿದ್ದ ತನ್ನ ತಂದೆಯನ್ನು 18 ವರ್ಷದ ಯುವತಿಯೊಬ್ಬಳು ಹೆಗಲ ಮೇಲೆ ಹೊತ್ತುಕೊಂಡು ಶಾಸಕರ ನಿವಾಸಕ್ಕೆ ಬಂದ ಘಟನೆ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ನಡೆದಿದೆ. ಎರಡು ಕಿ.ಮೀ ದೂರ ತಂದೆಯನ್ನು ಹೊತ್ತು ಸಾಗಿದ ಆಕೆ ರಾಜ್ಯದ ಕಳಪೆ ಆರೋಗ್ಯ ವ್ಯವಸ್ಥೆಯನ್ನೂ ಬಯಲಿಗೆಳೆದರು.
ದಿಂಡೋರಿ ಜಿಲ್ಲೆಯ ಕುಗ್ರಾಮವೊಂದರ ಅರಣ್ಯವಾಸಿಯಾದ ಶಿವಪ್ರಸಾದ್ ಎಂಬುವರಿಗೆ ಕೆಲ ತಿಂಗಳ ಹಿಂದೆ ಕಾಲಿನ ಗ್ಯಾಂಗ್ರೀನ್ ಉಂಟಾಗಿತ್ತು. ಇದರಿಂದ ಅವರಿಗೆ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಚಿಕಿತ್ಸೆಗಾಗಿ ಭೋಪಾಲ್, ಜಬಲ್‌ಪುರ ಮತ್ತು ದಿಂಡೋರಿಯ ಸರ್ಕಾರಿ ಆಸ್ಪತ್ರೆಗಳಿಗೆ ಕುಟುಂಬ ಸಾಕಷ್ಟು ಅಲೆದಾಡಿದೆ. ಹೀಗೆ, ದಿಂಡೋರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಲು ಅಲ್ಲಿ ಕನಿಷ್ಠ ಹಾಸಿಗೆ ಕೂಡ ಸಿಕ್ಕಿಲ್ಲ. ಇದರಿಂದ ನೊಂದ ಮಗಳು ರಂಜಿತಾ, ತನ್ನ ತಂದೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಶಾಸಕ ಓಂಕಾರ್ ಸಿಂಗ್ ಮಾರ್ಕಮ್ ಅವರ ಮನೆಗೆ ಬಂದರು.
ಕೊರೆವ ಚಳಿಯಲ್ಲಿ ದಿಂಡೋರಿಯ ಜಿಲ್ಲಾಸ್ಪತ್ರೆಯಲ್ಲಿ ತಂದೆಗೆ ಬೆಡ್ ಸಿಗದೇ ಇರುವುದರಿಂದ ದಿಕ್ಕುತೋಚದ ಮಗಳು, ತನ್ನ ಪರಿಸ್ಥಿತಿಯನ್ನು ವಿವರಿಸಲು ನೇರವಾಗಿ ಶಾಸಕ ಓಂಕಾರ್ ಮನೆಗೆ ಹೋಗುವ ನಿರ್ಧಾರ ಮಾಡಿದ್ದರು. ಜಿಲ್ಲಾಸ್ಪತ್ರೆಯಿಂದ ಶಾಸಕ ಓಂಕಾರ್ ಮನೆ ಅಂದಾಜು 2 ಕಿಲೋಮೀಟರ್ ದೂರದಲ್ಲಿದ್ದು, ಅಲ್ಲಿಯವರೆಗೂ ತಂದೆಯನ್ನು ಹೆಗಲಿನ ಮೇಲೆ ಹೊತ್ತು ನಡೆದುಕೊಂಡೇ ತಲುಪಿದ್ದಾರೆ. ಮಗಳು ತನ್ನ ತಂದೆಯನ್ನು ಹೀಗೆ ಎತ್ತಿಕೊಂಡು ಬಂದ ದೃಶ್ಯ ಕಂಡು ಶಾಸಕರು ಮತ್ತು ಅಲ್ಲಿ ನೆರೆದಿದ್ದವರ ಮನಸ್ಸು ಕಲಕಿತು. ನೆರವು ಯಾಚಿಸಿ ತನ್ನಲ್ಲಿಗೆ ಬಂದ ಯುವತಿಗೆ ಶಾಸಕರು ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದಿದರು.
ಸೂಕ್ತ ಚಿಕಿತ್ಸೆಗೆ ನಿರ್ದೇಶನ: ಶಾಸಕ ಓಂಕಾರ್ ಸಿಂಗ್ ಮಾರ್ಕಮ್ ಹಣಕಾಸಿನ ನೆರವು ನೀಡಿದ್ದಾರೆ. ಅಲ್ಲದೇ, ದಿಂಡೋರಿಯ ಜಿಲ್ಲಾಸ್ಪತ್ರೆಯ ಮುಖ್ಯ ಆರೋಗ್ಯ ಮತ್ತು ವೈದ್ಯಕೀಯ ಅಧಿಕಾರಿಗಳಿಗೆ ಕರೆ ಮಾಡಿ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ನಿರ್ದೇಶನ ನೀಡಿದ್ದಾರೆ.
ಗ್ಯಾಂಗ್ರೀನ್ ಕಾಯಿಲೆಯ ಬಗ್ಗೆ..: ಗ್ಯಾಂಗ್ರೀನ್ ಒಂದು ಅಪಾಯಕಾರಿ ಕಾಯಿಲೆ. ದೇಹದ ಕೆಲ ಭಾಗಗಳಲ್ಲಿ ಕಾಣಿಸಿಕೊಂಡು ಗಾಯವಾಗಿ ರೂಪುಗೊಳ್ಳುತ್ತದೆ. ನಂತರದಲ್ಲಿ ಇದು ಹರಡುತ್ತಲೇ ಇರುತ್ತದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಇದರಲ್ಲಿ ಡ್ರೈ ಗ್ಯಾಂಗ್ರೀನ್, ಆರ್ದ್ರ ಗ್ಯಾಂಗ್ರೀನ್ ಮತ್ತು ಗ್ಯಾಸ್ ಗ್ಯಾಂಗ್ರೀನ್ ಎಂಬ ಮೂರು ವಿಧಗಳಿವೆ. ಹೆಚ್ಚಿನ ಜ್ವರ, ಬೆವರು, ಚರ್ಮದ ಹಳದಿ ಬಣ್ಣಕ್ಕೆ ತಿರುವುದು ಗ್ಯಾಂಗ್ರೀನ್‌ನ ಪ್ರಮುಖ ಲಕ್ಷಣಗಳು.
ಇದನ್ನೂ ಓದಿ: ಮೃತಪಟ್ಟ 109 ವರ್ಷದ ವೃದ್ಧೆ ಮತ್ತೆ ಜೀವಂತ; ನೆಚ್ಚಿನ ಚಾಟ್ ತಿಂದು ಮಾತು ಶುರು ಮಾಡಿದ ಅಜ್ಜಿ