ಧನ್ಬಾದ್ (ಜಾರ್ಖಂಡ್): ಜಾರ್ಖಂಡ್ನ ಧನ್ಬಾದ್ ಜಿಲ್ಲೆಯಲ್ಲಿ ಹತ್ತು ದಿನಗಳಲ್ಲಿ ದೇವಸ್ಥಾನ ಖಾಲಿ ಮಾಡಬೇಕು ಎಂದು ಹೇಳಿ ಹನುಮ ದೇವರಿಗೆ ರೈಲ್ವೆ ಇಲಾಖೆ ನೋಟಿಸ್ ನೀಡಿದೆ. ಅಲ್ಲದೇ, ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದಾಗಿಯೂ ಎಚ್ಚರಿಸಲಾಗಿದೆ.
ಇಲ್ಲಿನ ರೈಲ್ವೆ ಇಲಾಖೆಗೆ ಸೇರಿ ದ್ವಾರಕ್ ಬೇಕರಬಂಧ್ ಕಾಲೋನಿಯಲ್ಲಿ ಈ ಹನುಮಾನ್ ದೇವಸ್ಥಾನ ಇದೆ. ಜಾಗ ಅತಿಕ್ರಮಣ ಮಾಡಿ ದೇವಸ್ಥಾನ ನಿರ್ಮಿಸಲಾಗಿದೆ ಎಂದು ನೋಟಿಸ್ ಜಾರಿ ಮಾಡಲಾಗಿದೆ. ದೇವಸ್ಥಾನದಲ್ಲಿ ಪೂರ್ವ ಮಧ್ಯ ರೈಲ್ವೆಯ ಸಹಾಯಕ ಇಂಜಿನಿಯರ್ ಹೆಸರಲ್ಲಿ ನೋಟಿಸ್ ಅಂಟಿಸಲಾಗಿದೆ.
ಅಲ್ಲದೇ, ರೈಲ್ವೆ ಭೂಮಿಯಲ್ಲಿ ದೇವಸ್ಥಾನವನ್ನು ಅಕ್ರಮವಾಗಿ ನಿರ್ಮಿಸಿರುವುದು ಕಾನೂನಿನ ಅಪರಾಧ ಎಂದು ರೈಲ್ವೆ ನೋಟಿಸ್‌ನಲ್ಲಿ ತಿಳಿಸಿದೆ. ಈ ನೋಟಿಸ್ ತಲುಪಿದ ಹತ್ತು ದಿನದೊಳಗೆ ಈ ಭೂಮಿಯನ್ನು ಖಾಲಿ ಮಾಡಬೇಕು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಇಷ್ಟೇ ಅಲ್ಲ, ಜಾಗ ತೆರವು ಮಾಡಿ ಹಿರಿಯ ಸೆಕ್ಷನ್ ಇಂಜಿನಿಯರ್ ಅವರಿಗೆ ಹಸ್ತಾಂತರಿಸಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೋಟಿಸ್ ಮೂಲಕ ಎಚ್ಚರಿಕೆ ನೀಡಲಾಗಿದೆ. ಇತ್ತ, ರೈಲ್ವೆ ಇಲಾಖೆಯ ಈ ನೋಟಿಸ್ ಬಗ್ಗೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಜನರು ಪ್ರತಿಭಟನೆ ಸಹ ನಡೆಸಿದ್ದಾರೆ. ದೇವಸ್ಥಾನದಲ್ಲಿ ಹನುಮಾನನನ್ನು ಅನೇಕ ತಲೆಮಾರಿನಿಂದ ಪೂಜಿಸುತ್ತಾ ಬಂದಿದ್ದೇವೆ. ಇಲ್ಲಿ 1931ರಿಂದಲೂ ಅನೇಕ ಜನರು ವಾಸುತ್ತಿದ್ದೇವೆ. ಆದರೆ, ಈಗ ದೇವಸ್ಥಾನವನ್ನು ತೆರವು ಮಾಡುವಂತೆ ರೈಲ್ವೆ ಇಲಾಖೆ ಒತ್ತಡ ಹೇರುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ಓದಿ: 5 ವರ್ಷಗಳಲ್ಲಿ 99 ಬಾರಿ ವಾರಾಣಸಿಗೆ ಭೇಟಿ ನೀಡಿದ ಸಿಎಂ ಯೋಗಿ