ಹೈದರಾಬಾದ್: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಮಹಿಳಾ ಸೂಪರ್ ಹೀರೋ ಆಗಿ ಅಭಿನಯಿಸಿರುವ, ಇತ್ತೀಚೆಗೆ ಬಿಡುಗಡೆಯಾದ 'ಧಾಕಡ್' ಸಿನಿಮಾ ಬಿಡುಗಡೆಗೂ ಮುನ್ನ ಸಖತ್ ಸೌಂಡ್ ಮಾಡಿತ್ತಾದರೂ, ದುರಾದೃಷ್ಟವಶಾತ್ ಬಾಕ್ಸ್ ಆಫೀಸ್ನಲ್ಲಿ ಗಳಿಕೆಯಿಲ್ಲದೇ ಸಂಪೂರ್ಣ ನೆಲಕಚ್ಚಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎಂಟನೇ ದಿನದಲ್ಲಿ ದೇಶಾದ್ಯಂತ ಕೇವಲ 20 ಟಿಕೆಟ್ಗಳಷ್ಟೇ ಮಾರಾಟವಾಗುವ ಮೂಲಕ, ಬಾಕ್ಸ್ ಆಫೀಸ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದೆ.
ಮೇ 20 ರಂದು 'ಧಾಕಡ್' ಚಿತ್ರ ತೆರೆಕಂಡಿತ್ತು, ಬಿಡುಗಡೆಯಾದ ಎರಡನೇ ದಿನಕ್ಕೆ ಚಿತ್ರ ಬಾಕ್ಸ್ ಆಫೀಸ್ ಗಳಿಕೆ ಇಳಿಕೆ ಕಂಡಿತ್ತು. ಈಗ ಎರಡನೇ ಶುಕ್ರವಾರದ ಕಲೆಕ್ಷನ್ ಕಂಗನಾ ಚಿತ್ರದ ಪತನವನ್ನು ಸಾಬೀತುಗೊಳಿಸಿದೆ. ಚಿತ್ರ ಬಿಡುಗಡೆಯಾದ ಎಂಟನೇ ದಿನಕ್ಕೆ ದೇಶದಾದ್ಯಂತ ಕೇವಲ 20 ಟಿಕೆಟ್‌ಗಳು ಮಾತ್ರ ಮಾರಾಟವಾಗಿದ್ದು, ಒಟ್ಟು 4,420 ರೂ. ಕಲೆಕ್ಷನ್ ಮಾಡಿದೆ. ಕಂಗನಾ ಅವರ ಇದುವರೆಗಿನ ಫ್ಲಾಪ್ ಸಿನಿಮಾಗಳಲ್ಲೂ ‘ಧಾಕಡ್’ ಟಾಪ್ ಸ್ಥಾನಕ್ಕೆ ತಲುಪಿದೆ.
100 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬರೋಬ್ಬರಿ 3 ಕೋಟಿಯಷ್ಟೇ ಗಳಿಸಿದೆ. ದೇಶಾದ್ಯಂತ 25 ಚಿತ್ರಮಂದಿರಗಳಲ್ಲಿ 2100 ಸ್ಕ್ರೀನ್‌ಗಳಲ್ಲಿ ಚಿತ್ರ ಓಡುತ್ತಿತ್ತು. ಇದೀಗ ದಿನದಿಂದ ದಿನಕ್ಕೆ ಗಳಿಕೆ ಕುಸಿಯುತ್ತಿರುವ ಕಾರಣ ಸಿನಿಮಾವನ್ನು ಥಿಯೇಟರ್ಗಳಿಂದ ತೆಗೆಯಲಾಗುತ್ತಿದೆ. ಮುಂಬೈನ ಯಾವುದೇ ಚಿತ್ರಮಂದಿರದಲ್ಲಿ ಈ ಚಿತ್ರ ಪ್ರದರ್ಶನ ಕಾಣುತ್ತಿಲ್ಲ ಎನ್ನುವುದೇ ಅಚ್ಷರಿಯಾಗಿದೆ.
ಧಾಕಡ್ ಸಿನಿಮಾದ ಜೊತೆಗೆ ಬಿಡುಗಡೆಯಾದ ‘ಭೂಲ್-ಭುಲೈಯಾ 2’ ಚಿತ್ರ ಗಳಿಕೆಯಲ್ಲಿ ದಾಖಲೆ ನಿರ್ಮಿಸುವ ಹಾದಿಯಲ್ಲಿ ಸಾಗುತ್ತಿದೆ. ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಈ ಚಿತ್ರದಲ್ಲಿ ಅಭಿನಯಿಸಿದ್ದು, ಚಿತ್ರ ಒಂದು ವಾರದಲ್ಲಿ 92 ಕೋಟಿ ಗಳಿಸಿದೆ. ಚಿತ್ರ 100 ಕೋಟಿ ಕ್ಲಬ್ ಸೇರಲು ಇನ್ನೆರಡು ಹೆಜ್ಜೆಯಷ್ಟೇ ಬಾಕಿ ಇದೆ.
ಮತ್ತೊಂದೆಡೆ ಹಾಲಿವುಡ್ ಸೂಪರ್ ಸ್ಟಾರ್ ಟಾಮ್ ಕ್ರೂಸ್ ಅಭಿನಯದ ‘ಟಾಪ್ ಗನ್-ಮೇವರಿಕ್’ ಸಿನಿಮಾ ಮೇ 27ರಂದು ದೇಶದಲ್ಲಿ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.
ಇದನ್ನೂ ಓದಿ: ವಿಕ್ರಮ್ ರವಿಚಂದ್ರನ್ ತ್ರಿವಿಕ್ರಮನಿಗೆ ಸಾಥ್ ಕೊಟ್ಟ ಕರುನಾಡ ಚಕ್ರವರ್ತಿ!