ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ಇಂಡಿಗೋ ಹಾಗೂ ಸ್ಪೈಸ್ಜೆಟ್ ಏರ್ಲೈನ್ಸ್ಗೆ ದಂಡ ವಿಧಿಸಿದ್ದ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ) ಇದೀಗ ಏರ್ ವಿಸ್ತಾರಾಗೂ 10 ಲಕ್ಷ ರೂಪಾಯಿ ದಂಡ ಹಾಕಿದೆ. ಪ್ರಯಾಣಿಕರ ಸುರಕ್ಷತಾ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ. ಮಧ್ಯಪ್ರದೇಶದ ಇಂದೋರ್ ವಿಮಾನ ನಿಲ್ದಾಣದಲ್ಲಿ ತರಬೇತಿ ಇಲ್ಲದ ಪೈಲಟ್ನಿಂದ ಪ್ರಯಾಣಿಕರಿದ್ದ ವಿಮಾನ ಲ್ಯಾಂಡಿಂಗ್ ಮಾಡಿಸಿದ್ದಕ್ಕಾಗಿ ಈ ದಂಡ ವಿಧಿಸಿರುವುದಾಗಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಡಿಜಿಸಿಎ ನೀಡಿರುವ ಟೇಕಾಫ್ ಮತ್ತು ಲ್ಯಾಂಡಿಂಗ್ ಕ್ಲಿಯರೆನ್ಸ್ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಏರ್ಲೈನ್ಸ್ ಕಂಪನಿಗೆ ದಂಡ ಹಾಕಲಾಗಿದೆ. ಏರ್ಲೈನ್ಸ್ ಕಂಪನಿ ತೆಗೆದುಕೊಂಡಿರುವ ನಿಯಮದಿಂದ ಪ್ರಯಾಣಿಕರ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇತ್ತು. ಇದೊಂದು ಗಂಭೀರ ನಿಯಮ ಉಲ್ಲಂಘನೆ ಅಪರಾಧವಾಗಿದೆ ಎಂದಿದೆ. ಸಿಮ್ಯುಲೇಟರ್ನಲ್ಲಿ ಅಗತ್ಯ ತರಬೇತಿ ಪಡೆಯದ ಪೈಲಟ್ ವಿಮಾನ ಲ್ಯಾಂಡ್ ಮಾಡಿದ್ದು, ಫರ್ಸ್ಟ್ ಆಫೀಸರ್ ವಿಮಾನವನ್ನು ಲ್ಯಾಂಡ್ ಮಾಡುವುದಕ್ಕೂ ಮುನ್ನ ಸಿಮ್ಯುಲೇಟರ್ನಲ್ಲಿ ತರಬೇತಿ ಪಡೆದಿರಬೇಕು. ಈ ರೀತಿ ತರಬೇತಿ ಪಡೆದವರನ್ನು ಲ್ಯಾಂಡ್ ಮಾಡುವುದಕ್ಕೆ ಅನುಮತಿಸುವ ಕ್ಯಾಪ್ಟನ್ ಸಹ ತರಬೇತಿ ಪಡೆದಿರಬೇಕು ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳೆದ ಮೇ 30ರಂದು ಈ ಘಟನೆ ನಡೆದಿದೆ.
ಇದನ್ನೂ ಓದಿ: ಕಮಲದೊಂದಿಗೆ ಹೊಸ ಅಧ್ಯಾಯ ಆರಂಭಿಸಿದ ಹಾರ್ದಿಕ್.. ಕೈ ಶಾಸಕರನ್ನು ಬಿಜೆಪಿಗೆ ಕರೆತರುತ್ತೇನೆಂದ ಯುವ ನಾಯಕ
ಕಳೆದ ಮೇ 7ರಂದು ರಾಂಚಿ ವಿಮಾನ ನಿಲ್ದಾಣದಲ್ಲಿ ದಿವ್ಯಾಂಗ ಮಗುವಿಗೆ ಬೋರ್ಡಿಂಗ್ ನಿರಾಕರಣೆ ಮಾಡಿದ್ದಕ್ಕಾಗಿ ಇಂಡಿಗೋ ಏರ್ಲೈನ್ಸ್ಗೆ 5 ಲಕ್ಷ ರೂ. ದಂಡ ಹಾಗೂ ಪೈಲಟ್ಗಳಿಗೆ ದೋಷಯುಕ್ತ ಸಿಮ್ಯುಲೇಟರ್ ಬಳಸಿದ ಕಾರಣ ಸ್ಪೈಸ್ ಜೆಟ್ಗೆ 10 ಲಕ್ಷ ರೂ ದಂಡ ವಿಧಿಸಲಾಗಿತ್ತು.