ಫತೇಪುರ್(ಉತ್ತರ ಪ್ರದೇಶ) : ಭಕ್ತರೊಬ್ಬರು ತಮ್ಮ ನಾಲಿಗೆಯನ್ನೇ ಕತ್ತರಿಸಿ ಶಿವ ಭವಾನಿ ದೇವಿಗೆ ಅರ್ಪಿಸಿದ ಘಟನೆ ಮಂಗಳವಾರ ನಡೆದಿದೆ. ಹೌದು, ನವರಾತ್ರಿಯ ಸಪ್ತಮಿಯ ಸಂದರ್ಭದಲ್ಲಿ, ಜಿಲ್ಲೆಯ ಕಲ್ಯಾಣಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗುಗೌಲಿ ಗ್ರಾಮದ ಬಳಿಯ ಶಿವ ಭವಾನಿ ಮಾತಾ ದೇವಸ್ಥಾನದಲ್ಲಿ ಭಕ್ತರೊಬ್ಬರು ತಮ್ಮ ನಾಲಿಗೆಯನ್ನು ಕತ್ತರಿಸಿ ಅರ್ಪಿಸಿ ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ.
ಭಕ್ತನು ತನ್ನ ನಾಲಿಗೆಯನ್ನು ಅರ್ಪಿಸಿದ ತಕ್ಷಣ ರಕ್ತದಲ್ಲಿ ತೊಯ್ದು ಹೋಗಿದ್ದಾನೆ. ಈ ಘಟನೆಯಿಂದ ದೇವಸ್ಥಾನದಲ್ಲಿ ಭಾರೀ ಸಂಚಲನ ಉಂಟಾಯಿತು. ಈ ಸುದ್ದಿಯು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹರಡುತ್ತಿದ್ದಂತೆಯೇ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬರಲಾರಂಭಿಸಿದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ನಾಲಿಗೆ ಕತ್ತರಿಸಿಕೊಂಡಿದ್ದ ಭಕ್ತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ಭಕ್ತನಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಪೊಲೀಸರು ಹೇಳಿದ್ದೇನು?: ಫತೇಪುರದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಈ ದೇವಿ ದೇವಸ್ಥಾನಕ್ಕೆ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಈ ಸಮಯದಲ್ಲಿ, ನಂಬಿಕೆಯ ವಿವಿಧ ರೂಪಗಳು ಕಂಡುಬರುತ್ತವೆ. ಕಲ್ಯಾಣಪುರ ಜಿಲ್ಲೆಯ ಫತೇಪುರದ ಗುಗೌಲಿ ಗ್ರಾಮದ ನಿವಾಸಿ ಬಾಬುರಾಮ್ ಪಾಸ್ವಾನ್ (65 ವರ್ಷ) ಎಂಬ ಭಕ್ತ ತಮ್ಮ ನಾಲಿಗೆಯನ್ನು ಅರ್ಧ ಕತ್ತರಿಸಿ, ಗುಗೌಲಿ ಗ್ರಾಮದ ಬಳಿಯ ದೇವಸ್ಥಾನದಲ್ಲಿ ಶಿವ ಭವಾನಿ ಮಾತಾಗೆ ಅರ್ಪಿಸಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಕಲ್ಯಾಣ್‌ಪುರ ಪೊಲೀಸ್ ಠಾಣೆಯ ಅಧಿಕಾರಿ ನೀರಜ್ ಯಾದವ್ ತಿಳಿಸಿದ್ದಾರೆ. ಈ ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಈ ವೃದ್ಧನಿಗೆ ಚಿಕಿತ್ಸೆ ನೀಡಲಾಗುತ್ತದೆ. ಅವರ ಸ್ಥಿತಿ ಸದ್ಯ ಸ್ಥಿರವಾಗಿದೆ ಎಂದು ಅವರು ಹೇಳಿದರು.
ದೇವರ ಕಣ್ಣಲ್ಲಿ ರಕ್ತ ಸುರಿಯಿತು ಎಂದು ಬೇಡರ ಕಣ್ಣಪ್ಪ ತನ್ನ ಕಣ್ಣನ್ನೇ ಕಿತ್ತಿ ಅಂಟಿಸಿದ್ದ. ಅದೇ ರೀತಿ ಉತ್ತರಪ್ರದೇಶದ ಈ ಭಕ್ತ ದೇವಿಗೆ ತಮ್ಮ ನಾಲಿಗೆಯನ್ನೇ ಕತ್ತರಿಸಿ ಅರ್ಪಿಸಿದ್ದಾರೆ.
ಹಿಂದೊಮ್ಮೆ ನಡೆದಿತ್ತು ನಾಲಿಗೆ ಕತ್ತರಿಸಿಕೊಂಡ ಘಟನೆ: ಭಕ್ತನೊಬ್ಬ ದೇವಿಗೆ ತನ್ನ ನಾಲಿಗೆಯನ್ನೇ ಕತ್ತರಿಸಿ ಅರ್ಪಿಸಿದ ಭೀಕರ ಘಟನೆ ಉತ್ತರಪ್ರದೇಶದ ಕೌಶಂಬಿಯಲ್ಲಿ 2022ರ ಸೆ.10ರಂದು ನಡೆದಿತ್ತು. ಬಳಿಕ ಅಧಿಕ ರಕ್ತಸ್ರಾವವಾಗಿ ಆತನ ಸ್ಥಿತಿ ಚಿಂತಾಜನಕವಾಗಿತ್ತು. ಇಲ್ಲಿನ ಶೀತಲ ಮಾತೆಯ ದೇಗುಲಕ್ಕೆ ಈ ಭಕ್ತ ಭೇಟಿ ನೀಡಿದ್ದನು. ಪತ್ನಿಯೊಂದಿಗೆ ಗಂಗಾನದಿಯಲ್ಲಿ ಸ್ನಾನ ಮಾಡಿದ ಆತ ಬಳಿಕ ಮಾತೆಯ ದೇಗುಲಕ್ಕೆ ಪೂಜೆಗೆ ಬಂದಿದ್ದರು. ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತುವಾಗ ನಮಸ್ಕರಿಸು ಎಂದು ಪತ್ನಿಗೆ ತಿಳಿಸಿದ್ದರು. ಪತ್ನಿ ಶಿರಬಾಗಿ ನಮಿಸುವಾಗ ಆತ ಇದ್ದಕ್ಕಿದ್ದಂತೆ ಬ್ಲೇಡ್ನಿಂದ ನಾಲಿಗೆಯನ್ನು ಕತ್ತರಿಸಿಕೊಂಡಿದ್ದನು.
ಪತಿಯ ಬಾಯಿಂದ ರಕ್ತ ಚಿಮ್ಮುತ್ತಿರುವುದನ್ನು ಕಂಡ ಪತ್ನಿ ಚಿಟಾರನೇ ಕಿರುಚಿದ್ದರು. ತಕ್ಷಣವೇ ಅಲ್ಲಿದ್ದವರ ಸಹಾಯದಿಂದ ನಾಲಿಗೆ ಕತ್ತರಿಸಿಕೊಂಡ ಭಕ್ತವತ್ಸಲನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ನಾಲಿಗೆ ಸಂಪೂರ್ಣವಾಗಿ ಕಟ್ ಆದ ಕಾರಣ ಅಧಿಕ ರಕ್ತಸ್ರಾವವಾಗಿತ್ತು. ಭಕ್ತನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು ಎಂದು ವೈದ್ಯರು ತಿಳಿಸಿದ್ದರು.
ಇದನ್ನೂ ಓದಿ: ಛತ್ತೀಸ್‌ಗಢದ ಕಂಕೇರ್‌ನಲ್ಲಿ ನಕ್ಸಲರಿಂದ ಐಇಡಿ ಸ್ಫೋಟ: ಇಬ್ಬರು ಬಿಎಸ್‌ಎಫ್ ಯೋಧರಿಗೆ ಗಾಯ