ಮುಂಬೈ: ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಗೃಹ ರಕ್ಷಕ ದಳದ ಮುಖ್ಯಸ್ಥ ಪರಂ ಬೀರ್ ಸಿಂಗ್ ಮುಖ್ಯಮಂತ್ರಿಗಳಿಗೆ ವರದಿ ನೀಡಿದ್ದರೂ, ಸಿಎಂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ಗೃಹ ಸಚಿವರು ತಮ್ಮ ಹುದ್ದೆಯಲ್ಲಿ ಮುಂದುವರಿಯುವವರೆಗೂ, ಈ ವಿಷಯದ ಬಗ್ಗೆ ತನಿಖೆ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಗೃಹ ಸಚಿವ ಅನಿಲ್ ದೇಶ್ಮುಖ್ ರಾಜೀನಾಮೆ ನೀಡಬೇಕು ಎಂದು ಫಡ್ನವಿಸ್ ಆಗ್ರಹಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಂ ಬೀರ್ ಸಿಂಗ್ ಅವರಿಗಿಂತ ಮೊದಲು ಮಹಾರಾಷ್ಟ್ರ ಡಿಜಿ ಸುಬೋಧ್ ಜೈಸ್ವಾಲ್ ಅವರು ಪೊಲೀಸ್ ವರ್ಗಾವಣೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿಗೆ ವರದಿ ಸಲ್ಲಿಸಿದ್ದರು. ಆದರೆ ಸಿಎಂ ಈ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ. ಹಾಗಾಗಿ, ಡಿಜಿ ಜೈಸ್ವಾಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು ಎಂದು ಆರೋಪಿಸಿದ್ದಾರೆ.
ಓದಿ : ಪ್ರತಿ ತಿಂಗಳು 100 ಕೋಟಿ ರೂ. ಸಂಗ್ರಹಿಸಲು ವಾಜೆ ಮೇಲೆ ಅನಿಲ್ ದೇಶಮುಖ್ ಒತ್ತಡ: ಪರಮ್ ಬೀರ್ ಸಿಂಗ್
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಈ ಸರ್ಕಾರ (ಮಹಾರಾಷ್ಟ್ರ ಸರ್ಕಾರ ) ವನ್ನು ರಚಿಸಿದ್ದಾರೆ. ಹಾಗಾಗಿ, ಅವರು ಈ ಪ್ರಕರಣವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಆದೇಶದ ಮೇರೆಗೆ ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣದಲ್ಲಿ ಬಂಧಿತರಾಗಿರುವ ಸಚಿನ್ ವಾಜೆಯನ್ನು ಮತ್ತೆ ಸೇವೆಗೆ ಕರೆತರಲಾಯಿತು. ಇದೆಲ್ಲಾ ಗೊತ್ತಿದ್ದರೂ, ಶರದ್ ಪವಾರ ಸತ್ಯವನ್ನು ಮರೆ ಮಾಚುತ್ತಿದ್ದಾರೆ ಎಂದು ಫಡ್ನವಿಸ್ ದೂರಿದ್ದಾರೆ.
ಪ್ರತಿ ತಿಂಗಳು 100 ಕೋಟಿ ರೂ. ಹಣ ಸಂಗ್ರಹಿಸುವಂತೆ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಒತ್ತಡ ಹೇರಿದ್ದರು ಎಂದು ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಂ ಬೀರ್ ಸಿಂಗ್ ಆರೋಪ ಮಾಡಿದ್ದರು.