ಆನಂದ್ (ಗುಜರಾತ್): ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಲೇ ಇದೆ. ಈ ನಡುವೆ 58 ವರ್ಷದ ಮಹಿಳೆಯೊಬ್ಬರು ಸತತ 24 ದಿನಗಳ ಕಾಲ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆದು ಕೋವಿಡ್ ಜಯಿಸಿದ್ದಾರೆ.
ಇದಿಷ್ಟೇ ಅಲ್ಲ ಆಕೆ ಸ್ತನ ಕ್ಯಾನ್ಸರ್ ಹಾಗೂ ಮಧುಮೇಹದಿಂದ ಬಳಲುತ್ತಿದ್ದರೂ ಆಕೆಯ ಇಚ್ಛಾಶಕ್ತಿಯಿಂದ ಬದುಕುಳಿದಿದ್ದಾರೆ. ಇದೀಗ ಆಕೆಯನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಕೋವಿಡ್ ಸೋಂಕಿತರಿಗೆ ಹೊಸ ಭರವಸೆ ಮೂಡಿಸಿದ್ದಾರೆ.
ಮಧುಮೇಹದಿಂದ ಹಾಸಿಗೆ ಹಿಡಿದ ಜಯಾಬೆನ್
ಖಂಭತ್ನಲ್ಲಿರುವ ಮಾಧವ್ಲಾಲ್ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಯಾಬೆನ್, ಆರ್ಟಿಪಿಸಿಆರ್ ಪರೀಕ್ಷೆಗೆ ಒಳಗಾದಾಗ ಕೊರೊನಾ ಇರುವುದು ದೃಢವಾಗಿತ್ತು. ಬಳಿಕ ಆಕೆಯ ಆಮ್ಲಜಕದ ಮಟ್ಟ ತೀರ ಕೆಳಗಿಳಿದಿದ್ದರಿಂದ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿತ್ತು.
ಜಯಾಬೆನ್‌ಗೆ 45-50 ಲೀಟರ್ ಆಮ್ಲಜನಕ
ಜಯಬೆನ್ ಅವರನ್ನು 24 ದಿನಗಳ ಕಾಲ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು, ಆ ಸಮಯದಲ್ಲಿ ಅವರಿಗೆ 45 ರಿಂದ 50 ಲೀಟರ್ ಆಕ್ಸಿಜನ್ ಅಗತ್ಯವಿತ್ತು. ಅವರು ಈ 24 ದಿನದಲ್ಲಿ ಎಂದಿಗೂ ವಿಶ್ವಾಸಗುಂದಲಿಲ್ಲ. ಅಲ್ಲದೇ 24ನೇ ದಿನ ಸಂಪೂರ್ಣ ಚೇತರಿಸಿಕೊಂಡು ಮನೆಗೆ ವಾಪಸಾಗಿದ್ದಾರೆ.
ಈ ಕುರಿತು ಆಸ್ಪತ್ರೆ ವೈದ್ಯರು ಸಹ ಸಂತಸ ವ್ಯಕ್ತಪಡಿಸಿದ್ದು, ಮಹಿಳೆಯ ಆತ್ಮಸ್ಥೈರ್ಯವೇ ಆಕೆಗೆ ರಕ್ಷಣೆ ನೀಡಿದೆ. ಇಲ್ಲಿಗೆ ಬಂದ ಒಂದೇ ಒಂದು ದಿನ ಆಕೆ ಗಲಿಬಿಲಿಗೊಂಡದ್ದು ನಾವು ನೋಡಿಲ್ಲ. ಇದು ಆಕೆಗೆ ಕೋವಿಡ್ ಜಯಿಸಲು ಸಹಾಯ ಮಾಡಿತು ಎಂದಿದ್ದಾರೆ.