ನವದೆಹಲಿ: ಕೊರೊನಾ ವೈರಸ್ನ ಡೆಲ್ಟಾ ಪ್ಲಸ್ ರೂಪಾಂತರ ಪ್ರಕರಣಗಳು ಪತ್ತೆಯಾದ ಜಿಲ್ಲೆಗಳಲ್ಲಿ ಜನಸಂದಣಿಯನ್ನು ತಡೆಗಟ್ಟುವುದು, ಟೆಸ್ಟಿಂಗ್, ಟ್ರ್ಯಾಕಿಂಗ್ ಮತ್ತು ವ್ಯಾಕ್ಸಿನೇಷನ್ ಹೆಚ್ಚಿಸುವುದು ಸೇರಿದಂತೆ ತಕ್ಷಣವೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ತಮಿಳುನಾಡು, ರಾಜಸ್ಥಾನ, ಕರ್ನಾಟಕ, ಪಂಜಾಬ್, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಗುಜರಾತ್ ಮತ್ತು ಹರಿಯಾಣಕ್ಕೆ ಬರೆದ ಪತ್ರದಲ್ಲಿ ಸೂಚಿಸಿದ್ದಾರೆ. ಕೋವಿಡ್ ಪಾಸಿಟಿವ್ ಬಂದ ಜನರ ಸ್ಯಾಂಪಲ್ಗಳನ್ನು ತಕ್ಷಣವೇ ಭಾರತೀಯ SARS-CoV-2 ಜೀನೋಮಿಕ್ ಕನ್ಸೋರ್ಟಿಯಾ (INSACOG)ದ ಗೊತ್ತುಪಡಿಸಿದ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವಂತೆ ಕೇಳಲಾಗಿದೆ.
ಇದನ್ನೂ ಓದಿ: ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರದ ಬಗ್ಗೆ ಅಧ್ಯಯನ ನಡೆಸಲು ಮುಂದಾದ ICMR-NIV
ಮೊದಲು ಭಾರತದಲ್ಲಿ ಪತ್ತೆಯಾಗಿ ಡೆಲ್ಟಾ 2ನೇ ಅಲೆ ಉಲ್ಬಣಕ್ಕೆ ಕಾರಣವಾಗಿದ್ದರೆ, ಡೆಲ್ಟಾ ಪ್ಲಸ್ ಇದಕ್ಕಿಂತಲೂ ಅಪಾಯಕಾರಿಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಈಗಾಗಲೇ ದೇಶದಲ್ಲಿ 45,000 ಸ್ಯಾಂಪಲ್ಗಳ ಪೈಕಿ 51 ಡೆಲ್ಟಾ ಪ್ಲಸ್ ಕೇಸ್ಗಳು ವರದಿಯಾಗಿದ್ದು, ಇದು ಶ್ವಾಸಕೋಶದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ರಾಜ್ಯಗಳಿಗೆ ಭೂಷಣ್ ಎಚ್ಚರಿಕೆ ರವಾನಿಸಿದ್ದಾರೆ.