ನವದೆಹಲಿ: ಕೊರೊನಾ 3ನೇ ಅಲೆ ಆತಂಕದ ನಡುವೆ ಹಕ್ಕಿ ಜ್ವರಕ್ಕೆ ದೇಶದಲ್ಲಿ ಮೊದಲ ಸಾವು ಸಂಭವಿಸಿದೆ. ಹರಿಯಾಣ ಮೂಲದ 11 ವರ್ಷದ ಬಾಲಕ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾನೆ. ಇದು ದೇಶದಲ್ಲಿ ಈ ವರ್ಷ ದಾಖಲಾದ ಮೊದಲ ಸಾವಿನ ಪ್ರಕರಣವಾಗಿದೆ.
ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ವರದಿಯು ಹಕ್ಕಿ ಜ್ವರದ ಸೋಂಕನ್ನು ದೃಢಪಡಿಸಿದೆ. ಜೊತೆಗೆ ಕೋವಿಡ್ ಪರೀಕ್ಷೆಯನ್ನೂ ನಡೆಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ.
ಹೆಚ್5ಎನ್1 ಸೋಂಕು ದೃಢವಾಗುತ್ತಿದ್ದಂತೆ ಬಾಲಕನ ಸಂಪರ್ಕಕ್ಕೆ ಬಂದವರನ್ನು ಗುರುತಿಸಲಾಗಿದೆ. ಹರಿಯಾಣದ ಸುಶೀಲ್ ಎಂಬಾತ ಬಾಲಕನ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಗುರುತಿಸಲಾಗಿದ್ದು, ನ್ಯುಮೋನಿಯಾ ಮತ್ತು ರಕ್ತಕ್ಯಾನ್ಸರ್ನಿಂದಾಗಿ ಅವರು ಬಳಲುತ್ತಿದ್ದಾರೆ. ಇವರಿಗೆ ಆರೋಗ್ಯದ ಮೇಲೆ ನಿಗಾ ಇರಿಸುವಂತೆ ತಿಳಿಸಲಾಗಿದ್ದು, ರೋಗ ಲಕ್ಷಣಗಳೇನಾದರೂ ಕಂಡು ಬಂದರೆ ತಕ್ಷಣ ಮಾಹಿತಿ ನೀಡುವಂತೆ ತಿಳಿಸಲಾಗಿದೆ.
ಅವರ ಗ್ರಾಮದಲ್ಲಿ ಇತರ ಹೆಚ್5ಎನ್1 ಪ್ರಕರಣಗಳ ಪತ್ತೆಯಾಗಿ ತಂಡವೊಂದನ್ನು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಕಳುಹಿಸಿಕೊಟ್ಟಿದೆ. ಇದಕ್ಕೂ ಮೊದಲು ದೇಶದ ನಾನಾ ರಾಜ್ಯಗಳಲ್ಲಿ ಹಕ್ಕಿಜ್ವರದ ಕಾರಣದಿಂದಾಗಿ ಸಾವಿರಾರು ಪಕ್ಷಿಗಳು ಸಾವನಪ್ಪಿದ್ದವು. ಹರಿಯಾಣದಲ್ಲೂ ಈ ಪ್ರಕರಣಗಳು ವರದಿಯಾಗಿದ್ದವು.