ನವದೆಹಲಿ: ಟ್ರೆಡ್‌ಮಿಲ್ ಮೇಲೆ ರನ್ನಿಂಗ್ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ಯುವಕ ಸಾವನ್ನಪ್ಪಿರುವ ಘಟನೆ ರಾಜಧಾನಿ ದೆಹಲಿಯ ರೋಹಿಣಿ ಪ್ರದೇಶದ ಜಿಮ್ ಸೆಂಟರ್‌ನಲ್ಲಿ ಬುಧವಾರ ಬೆಳಗ್ಗೆ 7.15ರ ಸುಮಾರಿಗೆ ನಡೆದಿದೆ. ರೋಹಿಣಿಯ ಸೆಕ್ಟರ್-19ರ ನಿವಾಸಿ ಸಕ್ಷಮ್ (24) ಮೃತರೆಂದು ಎಂದು ತಿಳಿದು ಬಂದಿದೆ.
ಟ್ರೆಡ್‌ಮಿಲ್ ಬಳಸುವಾಗ ವಿದ್ಯುತ್ ಪ್ರವಹಿಸಿ ಸಕ್ಷಮ್ ಕುಸಿದು ಬಿದ್ದಿದ್ದರು. ಸ್ಥಳೀಯ ಬಿಎಸ್‌ಎ ಆಸ್ಪತ್ರೆಗೆ ಕರೆತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷಾ ವರದಿಯ ಆಧಾರದ ಮೇಲೆ ಕೆಎನ್‌ಕೆ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 287/304 ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯ ಸಮಯದಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ವ್ಯಾಯಾಮ ಮಾಡುವಾಗ ಕುಸಿದು ಬಿದ್ದು ಸಾವು: ಕೆಲವು ದಿನಗಳ ಹಿಂದೆ ಬೆಂಗಳೂರಿನ ಜಿಮ್ವೊಂದರಲ್ಲಿ ವರ್ಕೌಟ್ ಮಾಡುತ್ತಿದ್ದಾಗಲೇ ದಿಢೀರ್ ಕುಸಿದು ಬಿದ್ದು ಮಹಿಳೆಯೊಬ್ಬಳು ಕೊನೆಯುಸಿರೆಳೆದಿದ್ದರು. ಬೆಂಗಳೂರಿನ ಮಲ್ಲೇಶಪಾಳ್ಯದಲ್ಲಿನ ಜಿಮ್ವೊಂದರಲ್ಲಿ ವರ್ಕೌಟ್ ಮಾಡುತ್ತಿರುವಾಗ ಘಟನೆ ನಡೆದಿತ್ತು. ವಿನಯ ಕುಮಾರಿ ಮೃತ ಮಹಿಳೆ ಎಂದು ಗುರುತಿಸಲಾಗಿತ್ತು. ಇವರು ಐಡಿಸಿ ಕಂಪನಿಯಲ್ಲಿ ಬ್ಯಾಕ್ಗ್ರೌಂಡ್ ವೆರಿಫಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಕಿರುತರೆ ಹಾಗೂ ಬಾಲಿವುಡ್ ನಟ ಸಿದ್ಧಾರ್ಥ್ ಶುಕ್ಲಾ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ನಿಧನರಾಗಿದ್ದರು. ಹಿಂದಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-13ರ ವಿಜೇತರಾಗಿದ್ದ ಶುಕ್ಲಾ, ಜಿಮ್‌ನಲ್ಲಿ ಕಸರತ್ತು ನಡೆಸುತ್ತಿದ್ದಾಗ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. ನಂತರ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದರು.
ಮುಂಬೈನ ಥಾಣೆಯ ವಿಷ್ಣು ನಗರದ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ 28 ವರ್ಷದ ಪ್ರತೀಕ್ ಪರದೇಶಿ ಎಂಬವರು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು. ಎಸ್ ಆರ್ ನಗರ ಪೊಲೀಸ್ ವ್ಯಾಪ್ತಿಯ ಗೋಲ್ಡನ್ ಜಿಮ್‌ನಲ್ಲಿ ವರ್ಕ್‌ಔಟ್ ವೇಳೆ ಆದಿತ್ಯ ಎಂಬ 29 ವರ್ಷದ ಯುವಕ ಮೃತಪಟ್ಟಿದ್ದರು. ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ: ಉತ್ತರಾಖಂಡ: 16 ಜನರ ಸಾವಿಗೆ ಕಾರಣವಾದ ಟ್ರಾನ್ಸ್‌ಫಾರ್ಮರ್ ಸ್ಫೋಟದ ವಿಡಿಯೋ