ನವದೆಹಲಿ: 33 ವರ್ಷದ ಮಹಿಳೆಯೊಬ್ಬಳು ಕಳೆದ 8 ವರ್ಷಗಳಿಂದ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದಳು. ಈ 8 ವರ್ಷಗಳಲ್ಲಿ ಆಕೆಯ ಬಾಯ್ಫ್ರೆಂಡ್ 14 ಬಾರಿ ಗರ್ಭಪಾತ ಮಾಡಿಸಿದ್ದಾನೆ. ಇದರಿಂದ ಮನನೊಂದು ಮಹಿಳೆ ಜುಲೈ 5 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಆರಂಭದಲ್ಲಿ ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಪರಿಗಣಿಸಿದ್ದರು. ಆದರೆ ಮಹಿಳೆಯ ಬಟ್ಟೆಯಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದೆ. ನಂತರ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಅತ್ಯಾಚಾರದ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆ ದೆಹಲಿಯ ಜೈತ್‌ಪುರ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಮಹಿಳೆಗೆ ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ 9 ವರ್ಷಗಳಿಂದ ತನ್ನ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಹಾಸ್ಟೆಲ್‌ಗೆ ಓದಲು ಕಳುಹಿಸಿದ್ದಳು. ಬಳಿಕ ಲಿವ್ ಇನ್ ರಿಲೇಶೆನ್ಶಿಪ್ನಲ್ಲಿದ್ದಳು.
ಇದನ್ನೂ ಓದಿ: 7 ಬಾರಿ ಗರ್ಭಪಾತ.. ಮದುವೆಯಾಗು ಎಂದಿದ್ದಕ್ಕೆ ಪ್ರೇಯಸಿಗೆ ವಿಷವುಣಿಸಿದ ಪ್ರಿಯಕರ
ಜುಲೈ 5 ರಂದು ಈ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಪ್ರಕರಣದ ತನಿಖೆಯ ವೇಳೆ ಪೊಲೀಸರಿಗೆ ಮಹಿಳೆಯ ಬಟ್ಟೆಯಿಂದ ಸೂಸೈಡ್ ನೋಟ್ ಸಿಕ್ಕಿದೆ. ಆತ್ಮಹತ್ಯೆ ಪತ್ರದಲ್ಲಿ ಮಹಿಳೆ ಕಳೆದ 8 ವರ್ಷಗಳ ದುರಂತವನ್ನು ಬರೆದಿದ್ದಾಳೆ. ಬಿಹಾರದ ಮಾಧೇಪುರದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಕಾರಣರಾಗಿದ್ದಾರೆ. ಆರೋಪಿ ನೋಯ್ಡಾ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಆಕೆ ಉಲ್ಲೇಖಿಸಿದ್ದಾಳೆ.
ಕಳೆದ 8 ವರ್ಷಗಳಲ್ಲಿ ತಾನು 14 ಬಾರಿ ಗರ್ಭಿಣಿಯಾಗಿದ್ದೆ. ಆದರೆ ಪ್ರತಿ ಬಾರಿ ಗರ್ಭಪಾತಕ್ಕೆ ಒತ್ತಾಯಿಸಲಾಯಿತು. ತನ್ನ ಮೊಬೈಲ್‌ನಲ್ಲಿ ಆರೋಪಿಗಳ ವಿರುದ್ಧ ಸಾಕ್ಷ್ಯಗಳನ್ನು ಇಟ್ಟುಕೊಂಡಿದ್ದೇನೆ ಎಂದು ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾಳೆ. ಪೊಲೀಸರು ಮೊಬೈಲ್ ಸೀಲ್ ಮಾಡಿದ್ದು, ತನಿಖೆ ನಂತರ ಎಫ್ಐಆರ್ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.